

ಪಾಂಡವಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ಶಾಲೆಗಳನ್ನು ಪಟ್ಟಿ ಮಾಡಿ ಅಂತಹ ಶಾಲೆಗಳನ್ನು ತಾಪಂ ಇಒ ಹಾಗೂ ಬಿಇಒಗಳು ದತ್ತು ಪಡೆದು ಶಾಲೆಯ ದಾಖಲಾತಿ ಹೆಚ್ಚಿಸುವ ಕಡೆಗೆ ಗಮನಹರಿಸಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
2025ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 25 ಫಲಿತಾಂಶ ಪಡೆದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ಕೊಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿ, ಶಾಲೆಯನ್ನು ದತ್ತು ಪಡೆದು ಫಲಿತಾಂಶ ಹೆಚ್ಚುವ ಕಡೆಗೆ ಗಮನಹರಿಸುವಂತೆ ತಾಪಂ ಇಒಗೆ ಸೂಚಿಸಿದರು.
ಮಕ್ಕಳು ಶಾಲೆಗೆ ಗೈರು ಹಾಜರಾಗಬಾರದು. ಗೈರು ಹಾಜರಾದಲ್ಲಿ ನಿಮ್ಮನ್ನು ಪರೀಕ್ಷೆಗೆ ಕೂರಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗ ಪಡೆಯಬೇಕು,. ಪಠ್ಯ ಅರ್ಥವಾಗದಿರುವ ಸಂದರ್ಭದಲ್ಲಿ ಶಿಕ್ಷಕರ ಜತೆ ಸಮಾಲೋಚಿಸಿ ಕಲಿತುಕೊಳ್ಳಲು ಪ್ರಯತ್ನಿಸಬೇಕು. ಮುಖ್ಯಶಿಕ್ಷಕರು ಗೈರು ಹಾಜರಾಗುವ ಮಕ್ಕಳ ಪಾಲಕರಿಗೆ ತಿಳಿವಳಿಕೆ ಪತ್ರ ನೀಡಬೇಕು ಎಂದು ತಿಳಿಸಿದರು.
ಒಂದು ವಾರದೊಳಗಾಗಿ ಎಲ್ಲ 54 ಮಕ್ಕಳಿಗೆ ಪರೀಕ್ಷೆ ನಡೆಸಿ ಕಡಿಮೆ ಅಂಕ ಗಳಿಸಿದ 27 ಮಕ್ಕಳನ್ನು ಒಂದು ಸೆಕ್ಷನ್, ಹೆಚ್ಚು ಅಂಕ ಗಳಿಸಿದ 27 ಮಕ್ಕಳನ್ನು ಒಂದು ಸೆಕ್ಷನ್ ಮಾಡಬೇಕು. ಕಡಿಮೆ ಅಂಕ ಗಳಿಸಿದ ಮಕ್ಕಳ ಸೆಕ್ಷನ್‌ಗೆ ಹೆಚ್ಚಿನ ನಿಗಾ ವಹಿಸಿ ವಿಷಯಗಳನ್ನು ಭೋಧನೆ ಮಾಡಬೇಕು ಎಂದು ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.
ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಗುಂಪು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿ, ಮಕ್ಕಳಿಗೆ ಪಾಠದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ವಿಷಯ ಅರ್ಥವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಆಶಕ್ತಿ ವಹಿಸಿ ಪಾಠ ಮಾಡಬೇಕೆಂದು ಶಿಕ್ಷಕರಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಪಟ್ಟಿ ಮಾಡಿ, ಸದರಿ ಶಾಲೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಲು ಅಗತ್ಯ ಕ್ರಮವಹಿಸುವಂತೆ ಜಿಪಂ ಉಪಕಾರ್ಯದರ್ಶಿಗೆ ಸೂಚಿಸಿದರು. ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ, ತಾಪಂ ಇಓ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಹಾಗೂ ಶಾಲಾ ಮುಖ್ಯಶಿಕ್ಷಕರು ಹಾಜರಿದ್ದರು.