ಬೋಧನಾ ಕ್ರಮದಲ್ಲಿ ಹೊಸ ವಿಧಾನ ಅಳವಡಿಸಿಕೊಳ್ಳಿ

18-ಎಸ್ಕೆಪಿ4
MLA, B.Y.Vijayendra, Advice, Education, Modern, Methods, Conference, ಶಾಸಕ, ಬಿ.ವೈ.ವಿಜಯೇಂದ್ರ, ಸಲಹೆ, ಶಿಕ್ಷಣ, ಆಧುನಿಕ, ವಿಧಾನಗಳು, ಸಮ್ಮೇಳನ,
Published on

ಶಿಕಾರಿಪುರ: ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಬೋಧನಾ ಕ್ರಮದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಣದಲ್ಲಿ ಹೊಸ ಪ್ರವೃತ್ತಿಗಳು ಮತ್ತು ಆಧುನಿಕ ವಿಧಾನಗಳು ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹೆಚ್ಚು ಅಧ್ಯಯನ ಮಾಡಿದಾಗ ಮಾತ್ರವೇ ಶ್ರೇಷ್ಠ ಅಧ್ಯಾಪಕರಾಗಲು ಸಾಧ್ಯ. ಶಿಕ್ಷಕರು ಪರಸ್ಪರ ಹೊಸ ಕಲಿಕಾ ವಿಧಾನಗಳ ಬಗ್ಗೆ ಹೆಚ್ಚೆಚ್ಚು ಚರ್ಚಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಪ್ರತಿಯೊಬ್ಬರಿಗೂ ಕೌಶಲಾಧಾರಿತ ಶಿಕ್ಷಣ ನೀಡಬೇಕು ಎಂಬುದು ಎಲ್ಲರ ಆಶಯ. 21ನೇ ಶತಮಾನದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಬಯಸುವ ಸಂದರ್ಭದಲ್ಲಿ ಸಂಶೋಧನೆಗಳು ಮತ್ತು ಅವುಗಳ ಫಲಿತಾಂಶಗಳನ್ನು ಪರಿಗಣಿಸಬೇಕು ಎಂದರು.

ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ನವೀನ ಬೋಧನೆ, ಕಲಿಕಾ ಪ್ರವೃತ್ತಿಗಳನ್ನು ತಂತ್ರಜ್ಞಾನದ ರೂಪಾಂತರದೊಂದಿಗೆ ಬಳಸಬೇಕಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟ ಸಾಧಿಸಲು ಉದಯೋನ್ಮುಖ ಶೈಕ್ಷಣಿಕ ತಂತ್ರಜ್ಞಾನಗಳ ಅರಿವು ಹೊಂದಬೇಕು. ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಗೆ ಒತ್ತು ನೀಡಬೇಕು. ಪಠ್ಯಕ್ರಮದ ನಾವೀನ್ಯತೆ, ವಿನ್ಯಾಸ ಮರುಹೊಂದಿಸಬೇಕು. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ ತರುವುದಕ್ಕೆ ಸಮ್ಮೇಳನ, ಕಾರ್ಯಾಗಾರಗಳು ಸಹಕಾರಿ ಎಂದು ತಿಳಿಸಿದರು.

ಸಮ್ಮೇಳನ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಅಬ್ದುಲ್ ಗಫೂರ್, ಶಿಕ್ಷಣ ತಜ್ಞ ಡಾ. ಎಚ್.ವಿ.ವಾಮದೇವಪ್ಪ, ಕರ್ನಾಟಕ ರಾಜ್ಯ ಅನುದಾನಿತ ಬಿ.ಇಡಿ ಕಾಲೇಜುಗಳ ಸಂಘದ ಅಧ್ಯಕ್ಷ ಡಾ. ಬಿ.ಪಿ.ಮಧುಮತಿ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net