ಶೇ.50 ಶುಲ್ಕ ವಿನಾಯ್ತಿಯಿಂದ ಸಿವಿಲ್, ಮೆಕಾನಿಕಲ್ ಕೋರ್ಸ್ ಪ್ರವೇಶಾತಿ ತುಸು ಹೆಚ್ಚಳ

Mechanical_Engg
Published on

ಬೆಂಗಳೂರು: ಶೇ.50 ಶುಲ್ಕ ರಿಯಾಯಿತಿಯಿಂದಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್ ಮತ್ತು ಇತರ ಕಡಿಮೆ ಪ್ರವೇಶ ಹೊಂದಿರುವ ಶಾಖೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಈ ವರ್ಷ ಶೇ. 18ರಷ್ಟು ಹೆಚ್ಚಳವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಕಡಿಮೆ ಪ್ರವೇಶ ಹೊಂದಿರುವ ಇಂಜಿನಿಯರಿಂಗ್ ಶಾಖೆಗಳ ಎಲ್ಲ ಸರಾಸರಿ ಪ್ರವೇಶಗಳಲ್ಲಿ ಶೇ.33 ರಷ್ಟಿದೆ. ಪ್ರಸ್ತುತ ವರ್ಷ ಇದು ಶೇ.51ಕ್ಕೆ ತಲುಪಿದೆ.

ಕಳೆದ ಮೂರು ವರ್ಷಗಳಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪ್ರವೇಶದ ಸರಾಸರಿ ಶೇ.29 ರಷ್ಟಿತ್ತು. ಆದರೆ, ಈ ವರ್ಷ ಅದು ಶೇ.40ಕ್ಕೆ ತಲುಪಿದೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪ್ರವೇಶವು ಶೇ.44 ರಿಂದ ಶೇ.52ಕ್ಕೆ ಏರಿದೆ.

ಮೆಕಾನಿಕಲ್ ಇಂಜಿನಿಯರಿಂಗ್ ಪ್ರವೇಶವು ಈ ವರ್ಷ ಶೇ.21ರಿಂದ 35ಕ್ಕೆ ಏರಿದೆ. ಸಿಲ್ಕ್ ಟೆಕ್ನಾಲಜಿ ಶೇ.60 ಪ್ರವೇಶವನ್ನು ಪಡೆದುಕೊಂಡಿದೆ, ಇದು ಕಳೆದ ಮೂರು ವರ್ಷಗಳಲ್ಲಿ ಶೇ.43 ರಷ್ಟಿತ್ತು. ಜವಳಿ ತಂತ್ರಜ್ಞಾನ ಇಂಜಿನಿಯರಿಂಗ್ ಪ್ರವೇಶವು ಶೇ.27 ರಿಂದ 70ಕ್ಕೆ ಏರಿದೆ.

ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಬೇಡಿಕೆ:

ಉದ್ಯೋಗ ಲಭ್ಯತೆ ಮತ್ತು ಇತರ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ (ಐಟಿ), ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ರೊಬಾಟಿಕ್ಸ್ ಮತ್ತು ಇತರ ಉದಯೋನ್ಮುಖ ತಾಂತ್ರಿಕ ಕೋರ್ಸ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಎಲ್ಲಾ ಕೋರ್ಸ್‌ಗಳ ಸೀಟುಗಳು ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗಿವೆ.

ಬೇಡಿಕೆ ಇರುವ ಮತ್ತು ಬೇಡಿಕೆ ಇಲ್ಲದ ಕೋರ್ಸ್‌ಗಳನ್ನು ಸರಿದೂಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರವು ಶೇ.50ರಷ್ಟು ಶುಲ್ಕ ರಿಯಾಯಿತಿ ನೀಡಿತ್ತು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಇತರ ಕೋರ್ಸ್‌ಗಳಿಗೆ ವಾರ್ಷಿಕ ಶುಲ್ಕ 44,950 ರೂ. ಆಗಿದ್ದರೆ, ಈ ಕೋರ್ ಇಂಜಿನಿಯರಿಂಗ್ ವಿಷಯಗಳಿಗೆ ಕೇವಲ 28,450 ರೂ. ವಿಧಿಸಲಾಗಿದೆ. ಆದರೂ ಕೋರ್ ವಿಷಯಗಳಲ್ಲಿ ದಾಖಲಾತಿ ಕುಸಿಯುತ್ತಿದೆ.

ಹೊಸ ತಂತ್ರಜ್ಞಾನ, ಕುಶಲತೆ ಇದ್ದರೆ ಬೇಡಿಕೆ

ಕೋರ್ಸ್‌ಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ. ಎಲ್ಲರಿಗೂ ಜೀವನ ಮುಖ್ಯ. ಆದ್ದರಿಂದ, ಉದ್ಯೋಗ ನೀಡುವ ಕೋರ್ಸ್‌ಗಳ ಕಡೆಗೆ ಆಕರ್ಷಿತರಾಗುವುದು ಸಹಜ. ಪ್ರಸ್ತುತ ಟ್ರೆಂಡಿಂಗ್ ಕೋರ್ಸ್‌ಗಳು ಸದ್ಯಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಆಕರ್ಷಕವಾಗಿರಬಹುದು. ಆದರೆ, ಕೋರ್ ಇಂಜಿನಿಯರಿಂಗ್ ಕೋರ್ಸ್‌ಗಳು ಶಾಶ್ವತವಾಗಿವೆ. ಈ ಕೋರ್ಸ್‌ಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಅನಿಸಿಕೆ ಹಂಚಿಕೊಂಡರು.

ಶುಲ್ಕ ಕಡಿತದ ಜತೆಗೆ, ಹೊಸ ತಂತ್ರಜ್ಞಾನದ ಪರಿಚಯ, ಶ್ರೇಷ್ಠತೆಯ ಕೇಂದ್ರಗಳ ಪ್ರಾರಂಭ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು, ಉದ್ಯೋಗ ಒದಗಿಸಿದರೆ ವಿದ್ಯಾರ್ಥಿಗಳು ಕೋರ್ ಕೋರ್ಸ್‌ಗಳತ್ತ ಆಕರ್ಷಿತರಾಗುತ್ತಾರೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net