ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಪ್ರವೇಶ: ತ್ರಿಪಾಠಿ ಮಾಹಿತಿ

sahyadri
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಆನಂದ್ ಕುಮಾರ್ ತ್ರಿಪಾಠಿ ಉದ್ಘಾಟಿಸಿದರು. ಡಾ.ಟಿ.ಅವಿನಾಶ್, ಬಿ.ಎನ್.ಪ್ರಕಾಶ್, ವೈ.ಎಚ್.ನಾಗರಾಜ್, ಡಾ.ಮುದುಕಪ್ಪ ಇತರರಿದ್ದರು.
Published on

ಶಿವಮೊಗ್ಗ: ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಪ್ರವೇಶ ಪ್ರಾರಂಭವಾಗಿದೆ. ಪಿಯುಸಿ, ಪದವಿ ಪೂರೈಸಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದು ವಿವಿ ನಿರ್ದೇಶಕ ಡಾ. ಆನಂದ್ ಕುಮಾರ್ ತ್ರಿಪಾಠಿ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ, ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಸ್ನಾತಕೋತ್ತರ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಆಂಡ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಇಲ್ಲಿ ಲಭ್ಯವಿದೆ. ಭದ್ರತೆ ಮತ್ತು ಪೊಲೀಸ್ ವಲಯದಲ್ಲಿ ಸಾಕಷ್ಟು ಉತ್ತಮ ಉದ್ಯೋಗ ಅವಕಾಶಗಳಿವೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದರು.
ಕಳೆದು ಹೋದ ಸಮಯ ಮರಳಿ ಬರುವುದಿಲ್ಲ. ಹೀಗಾಗಿ ಸಮಯಪ್ರಜ್ಞೆ ಅವಶ್ಯ. ವಿದ್ಯಾರ್ಥಿಗಳು ಈಗಲೇ ವೃತ್ತಿ ಬದುಕಿನ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿಕೊಳ್ಳಬೇಕು. ಭವಿಷ್ಯದ ಕುರಿತು ಯೋಜನೆ ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಿರ್ಣಾಯಕ ಅವಧಿಯಲ್ಲಿ ನೀವಿದ್ದೀರಿ. ಈಗಿನಿಂದಲೇ ನಿಮ್ಮ ಆಸಕ್ತಿದಾಯಕ ಕ್ಷೇತ್ರ ಗುರುತಿಸಿಕೊಂಡು, ಅಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ಸಂಕಲ್ಪ ಶಕ್ತಿಯೊಂದಿಗೆ ಮುನ್ನಡೆಯಬೇಕು. ಯಾರೂ ಶೇ.100 ಪರಿಪೂರ್ಣರಲ್ಲ. ಕಲಿಕೆ ವಿಚಾರದಲ್ಲಿ ಒಂದು ಶೈಕ್ಷಣಿಕ ಸಂಸ್ಥೆ ನಿಮಗೆ ಶೇ.25 ನೀಡಿದರೆ, ನಿಮ್ಮ ಶ್ರದ್ಧೆ ಶೇ.25 ನೀಡುತ್ತದೆ. ನಿಮ್ಮ ಗೆಳೆಯರು ಶೇ.25 ನೀಡಬಹುದು ಹಾಗೂ ಬಾಕಿ ಶೇ.25 ಏನನ್ನೂ ಕಲಿಯದೆ ಹಾಗೇ ಇರುತ್ತೀರಿ. ಇದನ್ನು ಸಮಯವೇ ನಿಮಗೆ ಕಲಿಸುತ್ತದೆ ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ವೈ.ಎಚ್.ನಾಗರಾಜ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಟಿ.ಅವಿನಾಶ್, ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಡಾ. ಕೆ.ಎನ್.ಮಂಜುನಾಥ, ಎನ್‌ಎಸ್‌ಎಸ್ ಅಧಿಕಾರಿಗಳಾದ ಬಿ.ಎನ್.ಪ್ರಕಾಶ್, ಡಾ. ಮುದುಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net