

ನಾಯಕತ್ವ ಬದಲಾವಣೆ ಕುರಿತಾದ ಹಲವು ತಿಂಗಳ ಚರ್ಚೆ, ಪ್ರಕ್ರಿಯೆ ಬುಧವಾರ ಸುಖಾಂತ್ಯಗೊಂಡಿದ್ದು, ಬಸವರಾಜ ಬೊಮ್ಮಾಯಿ ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಪುಟ ವಿಸ್ತರಣೆ ಆಗಬೇಕಿದ್ದು, ಪ್ರಧಾನಿ ಭೇಟಿ ಬಳಿಕ ಸಚಿವರ ಪ್ರಮಾಣವಚನ ನಿಗದಿಯಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ನೆರೆ ಪರಿಸ್ಥಿತಿಯ ಸಂಕಷ್ಟ ರಾಜ್ಯವನ್ನು ಕಾಡುತ್ತಿದೆ, ಕರೊನಾ ಮೂರನೇ ಅಲೆಯ ಅಪಾಯವೂ ಇದೆ. ಕರೊನಾ ನಂತರದ ಸ್ಥಿತಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಬೇಕಿದೆ. ಅಲ್ಲದೆ, ಉದ್ಯೋಗಸೃಷ್ಟಿ ಕಡೆಗೂ ಗಮನ ಹರಿಸಬೇಕಿದೆ. ನೂತನ ಮುಖ್ಯಮಂತ್ರಿ ಮುಂದೆ ಸಾಲು-ಸಾಲು ಸವಾಲುಗಳಿದ್ದು, ಸೂಕ್ತ ಪರಿಹಾರಕ್ಕಾಗಿ ಕಾಯುತ್ತಿವೆ. ರಾಜಕೀಯ ಅನುಭವ ಹೊಂದಿರುವ ಬೊಮ್ಮಾಯಿ ಆಡಳಿತವನ್ನು ಸರಿದಾರಿಗೆ ತರಲು ಮೊದಲ ಆದ್ಯತೆ ನೀಡಬೇಕಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬಸವರಾಜ ಬೊಮ್ಮಾಯಿಯವರು ಕೆಲ ಮಹತ್ವದ ಘೋಷಣೆಗಳನ್ನು ಹೊರಡಿಸುವ ಮೂಲಕ, ಕೆಲಸಗಳು ವೇಗದಿಂದ ನಡೆಯಲಿವೆ ಎಂಬ ಸಂದೇಶ ರವಾನಿಸಿದ್ದಾರೆ. ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ಶಿಷ್ಯವೇತನ ನೀಡಲು ನಿರ್ಧರಿಸಿದ್ದು, ಇದಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಆರ್ಥಿಕ ಸಂಕಷ್ಟದಿಂದ ರೈತರ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವುದು ಅಥವಾ ಉನ್ನತ ಶಿಕ್ಷಣದಿಂದ ವಿಮುಖವಾಗುತ್ತಿರುವುದು ಶೋಚನೀಯ. ಈ ನಿಟ್ಟಿನಲ್ಲಿ ಪ್ರಸಕ್ತ ನೆರವು ಪ್ರಯೋಜನಕಾರಿ ಆಗಬಲ್ಲದು. ಅಲ್ಲದೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನವನ್ನು 1000 ರೂಪಾಯಿಯಿಂದ 1200 ರೂ.ಗೆ ಹೆಚ್ಚಿಸಲಾಗಿದೆ. 35.98 ಲಕ್ಷ ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ವಿಧವಾ ವೇತನ ಮತ್ತು ಅಂಗವಿಕಲರ ಸಹಾಯಧನವನ್ನು 600 ರೂ.ರಿಂದ 800 ರೂ.ಗೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ.
ಕರೊನಾದಿಂದ ಆರ್ಥಿಕ ಸಂಕಷ್ಟ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮಾರ್ಚ್ 31ರೊಳಗೆ ಎಲ್ಲ ಇಲಾಖೆಗಳ ಖರ್ಚನ್ನು ಕನಿಷ್ಠ ಶೇಕಡ 5ರಷ್ಟಾದರೂ ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸುವ ಮೂಲಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇಲಾಖೆಗಳ ನಡುವೆ ಸಮನ್ವಯ ಕಾಯ್ದುಕೊಂಡು, ಕಾಲಮಿತಿಯೊಳಗೆ ಕೆಲಸಗಳನ್ನು ಪೂರ್ಣಗೊಳಿಸು ವಂತೆಯೂ ಸೂಚಿಸಿದ್ದಾರೆ. ಕಡತಯಜ್ಞದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನಮ್ಮಲ್ಲಿ ಘೋಷಣೆಗಳು, ಯೋಜನೆಗಳು, ಹೊಸ ಕಾರ್ಯಕ್ರಮಗಳಿಗೆ ಕೊರತೆಯೇನಿಲ್ಲ. ಆದರೆ, ಅದರ ಅನುಷ್ಠಾನದ ವಿಚಾರ ಬಂದಾಗ ಮಾತ್ರ ನಿರಾಸೆಯೇ ಕಾದಿರುತ್ತದೆ. ಹೊಸ ಸರ್ಕಾರದಲ್ಲಿ ಹಾಗಾಗಬಾರದು. ಆಡಳಿತಯಂತ್ರಕ್ಕೆ ವೇಗ ನೀಡಬೇಕು. ವಿಳಂಬನೀತಿಗೆ ಕೊನೆ ಹಾಡಬೇಕು. ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಈ ಪಯಣದಲ್ಲಿನ ಪ್ರತಿ ಹೆಜ್ಜೆಯನ್ನೂ ಬಲವಾಗಿ ಇರಿಸಿದಾಗಲೇ, ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯ. ಸಮಸ್ಯೆ-ಸವಾಲುಗಳು ಸಾಕಷ್ಟಿವೆ. ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತ, ಘೋಷಣೆಗಳು, ನಿರ್ಧಾರಗಳು ಅನುಷ್ಠಾನದ ಹಂತದಲ್ಲಿ ಹಳಿ ತಪ್ಪದಂತೆ ಕಾಳಜಿ ವಹಿಸಬೇಕಿದೆ.