

ಕೋಲಾರ: ಭೂಪರಿವರ್ತನೆಗೆ ಲಂಚ ಪಡೆಯುತ್ತಿದ್ದ ಜಿಲ್ಲೆಯ ಮಾಲೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
30 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ತಾಲೂಕಿನ ಎಡಿಎಲ್‌ಆರ್ ಅಶ್ವಿನಿ ಹಾಗೂ ಅಟೆಂಡರ್ ನಾಗಪ್ಪ ಎಂಬುವರನ್ನು ಬಂಧಿಸಿದ್ದಾರೆ.
ಹೊಸಕೋಟೆಯ ಎಂ.ವಿ.ಲೇಔಟ್‌ನ ಮಹೇಶ್ ಎಸ್. ಎಂಬುವರು ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದಲ್ಲಿನ 35 ಗುಂಟೆ ಕೃಷಿ ಜಮೀನಿನ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆಗಾಗಿ ಅರ್ಜಿಯು ಆರ್‌ಐ ಮಂಜುನಾಥ್ ಹಾಗೂ ಸ್ಕೇಚ್‌ಗಾಗಿ ಎಡಿಎಲ್‌ಆರ್ ಅಶ್ವಿನಿ ಬಳಿ ಬಾಕಿ ಉಳಿದಿತ್ತು. ಈ ಸಂಬಂಧ ದೂರುದಾರರು ಪದೇಪದೇ ಒತ್ತಾಯಿಸಿದಾಗ ಹಣ ಪಾವತಿ ಸಂಬಂಧ ಮಂಜುನಾಥ್ ಜತೆ ಮಾತನಾಡುವಂತೆ ಅಶ್ವಿನಿ ಹೇಳಿದ್ದರು.
ತಮ್ಮನ್ನು ಸಂಪರ್ಕಿಸಿದ ದೂರುದಾರನ ಬಳಿ ಮಂಜುನಾಥ್ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದೇ ದಿನ 10 ಸಾವಿರ ರೂ. ಪಡೆದಿದ್ದಾರೆ. ಇನ್ನುಳಿದ 30 ಸಾವಿರ ರೂ. ಲಂಚ ಪಡೆಯುವಾಗ ಶನಿವಾರ ತಾಲ್ಲೂಕು ಕಚೇರಿಯಲ್ಲಿ ಬಲೆಗೆ ಬಿದ್ದಿದ್ದಾರೆ. ಅಶ್ವಿನಿ, ಮಂಜುನಾಥ್ ಹಾಗೂ ಸಹಕರಿಸಿದ ಅಟೆಂಡರ್ ನಾಗಪ್ಪ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಕೆ.ಉಮೇಶ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ, ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.