ಬಿಎಸ್‌ವೈ ವಿರುದ್ಧದ ಕೇಸ್ ಡಿ.2ಕ್ಕೆ ಮುಂದೂಡಿಕೆ

highcourt
Published on

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ತಮ್ಮ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸಕಾರದ ಪರ ವಿಶೇಷ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ಪ್ರಕರಣ ಸಂಬಂಧ ಈಗಾಗಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 35ರಲ್ಲಿ ತಿಳಿಸಿರುವಂತೆ, ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ಪಡೆದ ಬಳಿಕ ಮೂರು ತಿಂಗಳಲ್ಲಿ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಬೇಕು. ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣವನ್ನು ವಿಶೇಷ ನ್ಯಾಯಾಲಯ ದಾಖಲಿಸಬೇಕು ಎಂದು ತಿಳಿಸಲಾಗಿದೆ.

ಆದರೆ, ಕಾಗ್ನಿಜೆನ್ಸ್ ಪಡೆದುಕೊಂಡು ಹೀಗಾಗಲೆ ಆರು ತಿಂಗಳು ಕಳೆದಿದೆ. ಆದ್ದರಿಂದ ಅರ್ಜಿದಾರ ಆರೋಪಿಯನ್ನು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ವಿನಾಯ್ತಿ ನೀಡಿ ಈ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು ಎಂದು ಕೋರಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಸೋಮವಾರ ಪೂರ್ಣಗೊಳಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಪಡಿಸಲಾಗುವುದು.

ಅಂದೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತು. ಅಲ್ಲದೆ, ಬಿಎಸ್‌ವೈ ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂಬ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net