

ಬೆಂಗಳೂರು: ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ೩ನೇ ಆರೋಪಿ ಸ್ವಾಮೀಜಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.೧೯ಕ್ಕೆ ನಗರದ ಸಿಸಿಎಚ್ ೫೭ ಕೋರ್ಟ್ ಮುಂದೂಡಿದೆ. ಸ್ವಾಮೀಜಿ ಪರ ವಕೀಲ ಅರುಣ್ ಶ್ಯಾಮ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ವಂಚನೆ ಪ್ರಕರಣದಲ್ಲಿ ಸ್ವಾಮೀಜಿ ವಿರುದ್ಧ ಯಾವುದೇ ಆರೋಪವಿಲ್ಲ. ಚೈತ್ರಾ ಕುಂದಾಪುರ ವಿರುದ್ಧ ಮಾತ್ರ ವಂಚನೆ ಆರೋಪವಿದೆ. ಹೀಗಾಗಿ ಸ್ವಾಮೀಜಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ಸೆ.19 ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಇನ್ನು ಹಾಲಶ್ರೀಗೆ ನಿರೀಕ್ಷಣಾ ಜಾಮೀನು ನೀಡದಂತೆ ಉದ್ಯಮಿ ಗೋವಿಂದಬಾಬು ಪೂಜಾರಿ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.