

ಶಿವಮೊಗ್ಗ: ನಗರದ ಐತಿಹಾಸಿಕ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಭರಣಿ ಮತ್ತು ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವವು ಸೋಮವಾರ ಭಾರಿ ಭಕ್ತ ಸಮೂಹದ ನಡುವೆ ಸಂಪನ್ನಗೊಂಡಿತು.
ನಗರದ ಹೊಳೆಹೊನ್ನೂರು ರಸ್ತೆಯ ಗುಡ್ಡೇಕಲ್ ದೇವಸ್ಥಾನದಲ್ಲಿ ಆಡಿಕೃತಿಕೆ ಜಾತ್ರೆಯ ಎರಡನೇ ದಿನವಾದ ಸೋಮವಾರ ಭಕ್ತಸಾಗರವೇ ಹರಿದುಬಂದಿತ್ತು. ಭಕ್ತರು ಭರಣಿ ಕಾವಡಿ ಹೊತ್ತು ಕಾಲ್ನಡಿಗೆಯಲ್ಲೇ ಬಂದು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ಹರಕೆ ಸಲ್ಲಿಸಿದರು. ಮಕ್ಕಳು, ಮಹಿಳೆಯರು, ಯುವಕರು, ವಯಸ್ಕರು ಕಾವಡಿಗಳನ್ನು ಹೊತ್ತು ದೇವರಿಗೆ ಸಮರ್ಪಿಸಿದರು.
ಸೋಮವಾರ ಬೆಳಗ್ಗೆ ಗುಡ್ಡೇಕಲ್ ಭಾಗದಲ್ಲಿ ಜನಜಾತ್ರೆಯೇ ನೆರೆದಿತ್ತು. ಸಾವಿರಾರು ಜನರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಕಾವಡಿ ಹೊತ್ತ ಭಕ್ತರು ಆಗಮಿಸಿ ಬಾಲಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದರು. ಜಾತ್ರೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆದವು. ಹಳದಿ ವಸ್ತ್ರಗಳನ್ನು ಧರಿಸಿದ್ದ ಭಕ್ತರ ಗುಂಪು ಭುಜದ ಮೇಲೆ ಕಾವಡಿಗಳನ್ನು ಹೊತ್ತು ವಾದ್ಯದ ತಾಳಕ್ಕೆ ತಕ್ಕ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದಲ್ಲಿ ವಿವಿಧ ಕಡೆಗಳಿಂದ ಕಾವಡಿಗಳನ್ನು ಹೊತ್ತು ಬರುವ ಭಕ್ತರನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು. ಕಾರು, ಖಾಸಗಿ ಬಸ್, ದ್ವಿಚಕ್ರ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ದೇವಸ್ಥಾನದ ಸುತ್ತಮುತ್ತ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಬೆಂಡು-ಬತ್ತಾಸು, ಖಾರ, ಮಂಡಕ್ಕಿ, ಮಕ್ಕಳ ಆಟಿಕೆ ವಸ್ತುಗಳು, ಬಳೆ ಮತ್ತಿತರ ವಸ್ತುಗಳ ಮಾರಾಟ ಮಳಿಗೆಗಳು ಜಾತ್ರೆಗೆ ಮೆರುಗು ನೀಡಿದ್ದವು.
ದೇವಸ್ಥಾನದ ಸುತ್ತಮುತ್ತ ಪುಂಡರ ಹಾವಳಿ ತಡೆಯಲು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಪೊಲೀಸ್ ಹೊರಠಾಣೆ ತೆರೆಯಲಾಗಿತ್ತು. ಕಳ್ಳತನ ಸೇರಿ ಅಹಿತಕರ ಘಟನೆ ನಡೆಯದಂತೆ ತಡೆಯಲು 35ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿತ್ತು. ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಗಿತ್ತು. ಮಳೆ ಬಿಡುವು ನೀಡಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.