ಎಡಿಜಿಪಿ ಚಂದ್ರಶೇಖರ ವಜಾಗೊಳಿಸಲು ಆಗ್ರಹ; ಜೆಡಿಎಸ್​ ಆಗ್ರಹ

1-RNR-04
Published on

ರಾಣೆಬೆನ್ನೂರ: ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿಯವರನ್ನು ಅವಾಚ್ಯ ಪದಗಳಿಂದ ನಿಂಧಿಸಿರುವ ಎಡಿಜಿಪಿ ಚಂದ್ರಶೇಖರ ಅವರನ್ನು ಈ ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಜೆಡಿಎಸ್​ ಕಾರ್ಯಕರ್ತರು ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಜೆಡಿಎಸ್​ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಭ್ರಷ್ಟಾಚಾರ, ದುರ್ನಡತೆ ಮತ್ತು ಸುಲಿಗೆ ಮುಂತಾದ ಕ್ರಿಮಿನಲ್​ ಕೇಸುಗಳಲ್ಲಿ ಭಾಗಿಯಾಗಿರುವ ಎಡಿಜಿಪಿ ಚಂದ್ರಶೇಖರ ಭೂಗಳ್ಳರು, ವ್ಯಾಪಾರಸ್ಥರು, ಸಮಾಜ ಘಾತುಕರ ಒಡನಾಟ ಬೆಳೆಸಿಕೊಂಡು ಶಾಮೀಲಾಗಿ ಸುಲಿಗೆಕೋರನಾಗಿ ಭ್ರಷ್ಟಾಚಾರಿಯಾಗಿದ್ದು ಸಮಾಜಕ್ಕೆ ಕಂಟಕಪ್ರಾಯನಾಗಿದ್ದಾನೆ ಎಂದು ಆರೋಪಿಸಿದರು.
ಬೆಂಗಳೂರು ನಗರದ ಹಲವಾರು ಕ್ರಿಮಿನಲ್​ಗಳ ಜತೆ ಶಾಮೀಲಾಗಿ ನಾಗರೀಕರನ್ನು ಹೆದರಿಸಿ ಬ್ಲಾಕ್​ ಮೇಲ್​ ಮಾಡುವುದು, ಸುಳ್ಳು ಮೊಕದ್ದಮೆ ದಾಖಲಿಸಿ ಹಣ ವಸೂಲಿ ಮಾಡುವುದು ಹಾಗೂ ಗೌರವಾನ್ವಿತ ರಾಜ್ಯಪಾಲರ ಕಚೇರಿ ಮೇಲೆ ದಾಳಿ ನಡೆಸುವ ದರ್ಪ ತೋರಿದ ಇವರನ್ನು ದಾಳಿಗೆ ಕಾರಣ ಕೇಳಿದ ಜೆಡಿಎಸ್​ ರಾಜ್ಯಾದ್ಯಕ್ಷ, ಕೇಂದ್ರ ಉಕ್ಕು ಮತ್ತು ಬೃಹತ್​ ಕೈಗಾರಿಕಾ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಕೊಳಕು ಭಾಷೆಯಿಂದ ನಿಂದಿಸಿರುವುದು ಒಬ್ಬ ಚುನಾಯಿತ ಅಭ್ಯಥಿರ್ಗೆ ಅವಹೇಳನಕಾರಿ ಪದ ಬಳಸಿ ಪತ್ರ ಬರೆದಿರುವುದು ಇವರ ದುರ್ನಡತೆಯನ್ನು ಎದ್ದು ತೋರುತ್ತದೆ.
ಆದ್ದರಿಂದ ಸಚಿವರ ವಿರುದ್ಧ ಅವಹೇಳನಕಾರಿ, ಅಸಭ್ಯ ಪದ ಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಎಡಿಜಿಪಿ ಚಂದ್ರಶೇಖರ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಜೊತೆಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್​ ತಾಲೂಕು ಅಧ್ಯಕ್ಷ ಚಂದ್ರಗೌಡ ಭರಮನಗೌಡ್ರ, ನಗರಾಧ್ಯಕ್ಷ ರಮೇಶ ಮಾಕನೂರ, ಮೌನೇಶ ಮನುವಾಚಾರಿ, ನಾಗರಾಜ ಅಜ್ಜನವರ, ಎಸ್​.ಜಿ. ಗುಡಿಮನಿಯವರ, ಎಸ್​.ವಿ. ಪಟ್ಟಣಶೆಟ್ಟಿ, ಪುನೀತ್​ ಆರ್​.ಬಿ., ಸುರೇಶ ಬಿ.ಬಿ., ಕೆ.ಎಸ್​. ಉದಗಟ್ಟಿ, ಗುಡ್ಡಪ್ಪ ಎಚ್​.ಎಂ., ದೀಪಾ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net