ನಿಮಿಷಾಂಬ ದೇವಿಗೆ ಹರಕೆ ಹೊತ್ತ 22 ಗಂಟೆಯಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ; ಎಡಿಜಿಪಿ ಅಲೋಕ್ ಕುಮಾರ್

ಅಲೋಕ್ ಕುಮಾರ್
Published on

ಮಂಡ್ಯ: ''2011ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಆದಾಗ, ನಿಮಿಷಾಂಬ ದೇವಿಗೆ ಹರಕೆ ಹೊತ್ತಿದ್ದೆ. ಹರಕೆ ಹೊತ್ತ 5 ಗಂಟೆಯೊಳಗೆ ಕೊಲೆ ಆರೋಪಿಯನ್ನು ಬಂಧಿಸಲಾಗಿತ್ತು. ಈ ಬಾರಿ ದೇವಿಗೆ ಪೂಜೆ ಸಲ್ಲಿಸಿ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಹರಕೆ ಹೊತ್ತಿದ್ದೆ. ಈಗಲೂ ಹರಕೆ ಹೊತ್ತ 22 ಗಂಟೆಯಲ್ಲೇ ಸ್ಯಾಂಟ್ರೋ ರವಿ ಬಂಧನವಾಗಿದೆ. ದೇವಿ ಮೇಲೆ ನನಗೆ 12 ವರ್ಷಗಳಿಂದ ನನಗೆ ನಂಬಿಕೆ ಇದೆ'' ಎಂದು ಹೇಳಿರುವುದು ಎಡಿಜಿಪಿ ಅಲೋಕ್ ಕುಮಾರ್.

ಸ್ಯಾಂಟ್ರೋ ರವಿ ಬಂಧನವಾದ ಬೆನ್ನಲ್ಲೇ ಇದೀಗ ಮಂಡ್ಯದ ಗಂಜಾಂ ಗ್ರಾಮದಲ್ಲಿರುವ ನಿಮಿಷಾಂಬ ದೇವಾಲಯಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅಲೋಕ್ ಕುಮಾರ್, ಸ್ಯಾಂಟ್ರೋ ರವಿಯಿಂದ ಸರ್ಕಾರಕ್ಕೆ ಹಾಗೂ ರಾಜ್ಯ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹೀಗಾಗಿ ಆತ ಬೇಗ ಬಂಧನವಾಗಲಿ ಎಂದು ಹರಕೆ ಹೊತ್ತಿದ್ದೆ. ಇದಾದ ಬಳಿಕೆ 22 ಗಂಟೆಯಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ. ಹೀಗಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇನೆ ಎಂದರು.

ಸದ್ಯ ಸ್ಯಾಂಟ್ರೋ ರವಿ ಪೊಲೀಸರು ಕಸ್ಟಡಿಯಲ್ಲಿದ್ದಾನೆ. ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸಿ, ಆತನ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಮೊದಲು ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗೆಗೆ ವಿಚಾರಣೆ ನಡೆಸಲಾಗುತ್ತದೆ. ನಂತರ ಆತ ತಲೆ ಮರೆಸಿಕೊಂಡು ಎಲ್ಲೆಲ್ಲಿ ಇದ್ದ? ಆತನಿಗೆ ಯಾರೆಲ್ಲಾ ಸಹಾಯ ಮಾಡಿದ್ದಾರೆ? ಎಂಬ ಬಗೆಗೆ ವಿಚಾರಣೆ ಮಾಡುತ್ತೇವೆ. ಆತನಿಗೆ ಸಹಾಯ ಮಾಡಿದ್ದು ಯಾರೆಂದು ಗೊತ್ತಾದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net