

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಕ್ರಮ ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ.
ರಾಜ್ಯದಲ್ಲಿ 45 ಸಾವಿರ ರೌಡಿಗಳಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ. ಸತತವಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಕೋಲಾರದಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೋಲಾರ ನಗರದಲ್ಲೆಡೆ ಸಂಚಾರ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಕೋಲಾರದ ಟ್ಲಕ್ ಟವರ್ ಸೇರಿದಂತೆ ಕೆಲ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಗಲಾಟೆಗಳಿಗೆ ಆಸ್ಪದ ನೀಡದಂತೆ ಎಸ್ಪಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ 5605 ಎಸ್ಎಸ್ಟಿ ತಂಡವಿದೆ. 2030 ವಿಚಕ್ಷಣಾ ದಳ, 1060 ಸಿಆರ್ಪಿಎಫ್ ತಂಡಗಳಿವೆ. ನಾಳೆ ನಾಲ್ಕು ಸಿಆರ್ಪಿಎಫ್ ತಂಡಗಳು ಕೋಲಾರಕ್ಕೆ ಬರುತ್ತಿವೆ. ಒಟ್ಟಾರೆ 600 ಪ್ಯಾರಾಮಿಲಿಟರಿ ತಂಡಗಳಿವೆ. ಕಾನೂನು ಸುವ್ಯವಸ್ಥೆ ಹದಗೆಡುವವರ ಮೇಲೆ ಬಹಳ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅಲೋಕ್ ಕುಮಾರ್ ಹೇಳಿದರು. (ದಿಗ್ವಿಜಯ ನ್ಯೂಸ್)