ಎಸ್‌ಸಿ ಸಮೀಕ್ಷೆಗೆ ಸಮರ್ಪಕ ಸಿದ್ಧತೆ: ಸಚಿವ ಮುನಿಯಪ್ಪ ಸೂಚನೆ | Scientific data collection must

SC meeting
Published on

ಬೆಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿ, ಉಪಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಹಂಚಿಕೆಯಾಗಲಿದೆ. ಇದೇ ಉದ್ದೇಶಕ್ಕಾಗಿ ನಡೆಯಲಿರುವ ಪರಿಶಿಷ್ಟ ಜಾತಿ ಸಮೀಕ್ಷೆಗೆ ಏನೆಲ್ಲ ಸಿದ್ಧತೆಗಳಾಗಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಬುಧವಾರ ಪರಾಮರ್ಶಿಸಿದರು.

ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಪರಿಶೀಲನಾ ಸಭೆ ಬುಧವಾರ ನಡೆಯಿತು. ಮನೆ, ಮನೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಸೂಕ್ತ ತರಬೇತಿ, ಮಾಹಿತಿ ನೀಡುವಂತೆಯೂ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.

ಮೂರು ದಶಕಗಳಿಂದ ನಿರೀಕ್ಷಿಸುತ್ತಿರುವ ಎಸ್‌ಸಿ ಮೀಸಲು ವರ್ಗೀಕರಣ ವೈಜ್ಞಾನಿಕವಾಗಿ ನಡೆಸಲು ಬೇಕಾದ ಸಿದ್ಧತೆಗಳಾಗುತ್ತಿವೆ. ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಕಾಲ ಕಾಲಕ್ಕೆ ಕೇಳಿದ ಮಾಹಿತಿ ಒದಗಿಸಿ, ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

ವಿಸ್ತೃತ ಸಮೀಕ್ಷೆಗಾಗಿ ಆಗಿರುವ ತಯಾರಿಗಳ ಬಗ್ಗೆ ವಿವರ ಪಡೆದರು. ಸರ್ಕಾರ ಸಾಧ್ಯವಾದಷ್ಟು ಬೇಗ ಮೀಸಲು ವರ್ಗೀಕರಣಕ್ಕೆ ಬಯಸಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಜವಾಬ್ದಾರಿ ನಿರ್ವಹಿಸಬೇಕು ಎಂದು ಸಭೆ ಸೂಚಿಸಿತು.

ಈ ಸಭೆಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ರಾಕೇಶ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಗೋನಾಳ ಭೀಮಪ್ಪ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net