ಹೆಚ್ಚುವರಿ ಸುಂಕ, ಹೆಚ್​​-1ಬಿ ವೀಸಾ ವಿಚಾರ; ಇಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ರುಬಿಯೋ-ಜೈ ಶಂಕರ್ ಭೇಟಿ, ಚರ್ಚೆ| Jai Shankar

Untitled design (76)
Published on

Jai Shankar: ಅಮೆರಿಕಾ-ಭಾರತ ನಡುವೆ ಹೆಚ್ಚುವರಿ ತೆರಿಗೆ, ಹೆಚ್​-1ಬಿ ವೀಸಾ ಶುಲ್ಕ ನೀತಿಗಳ ಕುರಿತು ಇಂದು (ಸೆ. 22) ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಸೋಮವಾರ ವರದಿಯಾಗಿದೆ.

ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ ಕೆಲವು ದಿನಗಳ ನಂತರ, ಭಾರತದ ಮೇಲಿನ ಒಟ್ಟು ಸುಂಕವನ್ನು ಶೇಕಡಾ 50 ಕ್ಕೆ ಏರಿಸಲಾಯಿತು. ಸುಂಕ ಏರಿಕೆಯ ಬಳಿಕ  ಇದೇ ಮೊದಲ ಬಾರಿಗೆ ರುಬಿಯೊ ಅವರನ್ನು ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದಾರೆ.

ಭಾರತೀಯ ಕಾಲಮಾನ ಇಂದು ರಾತ್ರಿ 8.30ರ ಸುಮಾರಿಗೆ ರುಬಿಯೋ-ಜೈಶಂಕರ್ ಮಾತುಕತೆ ನಡೆಯಲಿದೆ. ಪ್ರಮುಖವಾಗಿ ಭಾರತದ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕ, ಹೆಚ್​-1ಬಿ ವೀಸಾ ಶುಲ್ಕ ಕುರಿತಾಗಿ ಜೈಶಂಕರ್ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಮ್ಮೇಳನದಲ್ಲಿ ಭಾಗವಹಿಸಲು ನ್ಯೂಯಾರ್ಕ್​ಗೆ ತೆರಳಿರುವ ಜೈ ಶಂಕರ್, ಸಮ್ಮೇಳನದ ನಡುವೆಯೇ ರುಬಿಯೋ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವಾರ ಪೂರ್ತಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆ ನಡೆಸುವ ಜೈಶಂಕರ್ ಸೆಪ್ಟೆಂಬರ್ 27 ರಂದು ಯುಎನ್‌ಜಿಎ ಸಾಮಾನ್ಯ ಸಮ್ಮೇಳನದಲ್ಲಿ ಭಾರತದ ಭಾಷಣ ಮಾಡಲಿದ್ದಾರೆ.

ಇದೇ ವೇಳೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವದ ನಿಯೋಗವು ಅಮೆರಿಕಾದಲ್ಲಿದೆ. ಬಾಕಿ ವ್ಯಾಪಾರ ಒಪ್ಪಂದಗಳ ಕುರಿತು ಈ ನಿಯೋಗವು ಮಾತುಕತೆ ನಡೆಸಲಿದೆ. ಪರಸ್ಪರ ಪ್ರಯೋಜನಕಾರಿ ಒಪ್ಪಂದದ ಆರಂಭಿಕ ತೀರ್ಮಾನವನ್ನು ಸಾಧಿಸುವ ಉದ್ದೇಶದಿಂದ ನಿಯೋಗವು ಚರ್ಚೆಗಳನ್ನು ಮುಂದುವರಿಸಲು ಯೋಜಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net