ಡ್ರೋಣ್ ಸಮೀಕ್ಷೆ ವ್ಯಾಪ್ತಿಗೆ 10 ಜಿಲ್ಲೆಗಳ ಸೇರ್ಪಡೆ: ಕೇಂದ್ರ ಸಚಿವರಿಗೆ ಕೃಷ್ಣಬೈರೇಗೌಡ ಮನವಿ | Swamitva program extend

Revnue Minister
Published on

ಬೆಂಗಳೂರು: ಆಧುನೀಕರಣ ಹಾಗೂ ಡಿಜಿಟಿಲೀಕರಣದ ಭಾಗವಾಗಿ ರಾಜ್ಯದ ಒಟ್ಟಾರೆ ಭೌಗೋಳಿಕ ಪ್ರದೇಶದ ಪೈಕಿ 1,91,791 ಚದರ ಕಿ.ಮೀ. ಭೌಗೋಳಿಕ ಪ್ರದೇಶದ ಡ್ರೋಣ್ ಸಮೀಕ್ಷೆ ಚಾಲ್ತಿಯಲ್ಲಿದೆ. ಡ್ರೋಣ್ ಸರ್ವೇಗೆ ಹೊಸದಾಗಿ 10 ಜಿಲ್ಲೆಗಳ ಸೇರ್ಪಡೆಗೆ ಹಣಕಾಸಿನ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿನಂತಿಸಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಶನಿವಾರ ಭೇಟಿಯಾದ ಅವರು ಈ ಕುರಿತು ಮನವಿಪತ್ರ ಸಲ್ಲಿಸಿ, ಭೂದಾಖಲೆಗಳ ಡಿಜಿಟಿಲೀಕರಣ, ಆಧುನಿಕರಣದ ಪ್ರಗತಿದ ವಿವರಿಸಿದರು.

ರಾಜ್ಯದ 31 ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ, 16 ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳು ಈ ಸಮೀಕ್ಷಾ ಕಾರ್ಯಕೈಗೆತ್ತಿಕೊಂಡಿವೆ. ಐದು ಜಿಲ್ಲೆಗಳಿಗೆ ಕೇಂದ್ರ ಅನುದಾನ ನೀಡುತ್ತಿದ್ದು, ಬಾಕಿ 16 ಜಿಲ್ಲೆಗಳ ಸಮೀಕ್ಷಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.

ಉಳಿದ 10 ಜಿಲ್ಲೆಗಳ 48,307 ಚದರ ಕಿ.ಮೀ.ಗೆ ಡ್ರೋಣ್ ಸಮೀಕ್ಷೆ ವಿಸ್ತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು. ಪ್ರತಿ ಚ.ಕಿ.ಮೀ, ಸಮೀಕ್ಷೆಗೆ 45 ಸಾವಿರ ರೂ.ಗಳಂತೆ ಹೆಚ್ಚುವರಿ 217.38 ಕೋಟಿ ರೂ. ಅನುದಾನ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮನವಿ ಮಾಡಿದರು.

ತಾರತಮ್ಯ ನಿವಾರಣೆಯಾಗಲಿ

ಭೂದಾಖಲೆಗಳ ಡಿಜಿಟಿಲೀಕರಣ ಹಾಗೂ ಆಧುನೀಕರಣ ವ್ಯವಸ್ಥೆಯಡಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂದಿದ್ದರೂ ಪ್ರೋತ್ಸಾಹಧನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆಯಡಿ ವಿಶೇಷ ನೆರವಿನ ರೂಪದಲ್ಲಿ 2024-25ನೇ ಸಾಲಿಗೆ 137.34 ಕೋಟಿ ರೂ. ಪ್ರೋತ್ಸಾಹಧನ ಹಂಚಿಕೆ ಮಾಡಿದ್ದನ್ನು ಪರಿಷ್ಕರಿಸಿ ಹೆಚ್ಚಿಸಬೇಕು

ಸ್ವಾಮಿತ್ವ ಕಾರ್ಯಕ್ರಮದಡಿ ಗ್ರಾಮೀಣ ಭೂದಾಖಲೆಗಳ ಡಿಜಿಟಿಲೀಕರಣಕ್ಕೆ ಗಾಂವಠಾಣ ಸೇರಿ 16,721 ಹಳ್ಳಿಗಳ ಡ್ರೋಣ್ ಸರ್ವೇಪ್ರಗತಿಯಲ್ಲಿದ್ದು, ಈಗಾಗಲೇ 3,829 ಗ್ರಾಮಗಳ 10 ಲಕ್ಷ ಆಸ್ತಿಗಳಿಗೆ ಸ್ವಾಮಿತ್ರ ಪತ್ರ ವಿತರಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಒಟ್ಟು 30.60 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಕೇಂದ್ರದ ವಿಶೇಷ ಪ್ರೋತ್ಸಾಹಧನದಡಿ ಈ ಕಾರ್ಯಕ್ರಮವನ್ನು ಪರಿಗಣಿಸಬೇಕು. ಭೂ ಸುರಕ್ಷಾ ಯೋಜನೆಯಡಿ ಪ್ರಾಯೋಗಿಕವಾಗಿ 31 ತಾಲೂಕುಗಳ ಭೂದಾಖಲೆಗಳ ಎಂಟು ಕೋಟಿ ಪುಟಗಳನ್ನು ಡಿಜಿಟಿಲೀಕರಣವಾಗಿದ್ದು, ಭೂದಾಖಲೆಗಳ ಕೊಠಡಿ ಆಧುನೀಕರಿಸಲಾಗಿದೆ.

ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 31 ತಾಲೂಕುಗಳಲ್ಲಿ ಡಿಜಿಟಿಲೀಕರಣ- ಆಧುನೀಕರಣವು ಪೈಲಟ್ ಪ್ರೊಜೆಕ್ಟ್‌ನಡಿ ಮುಗಿದಿದೆ. 191 ತಾಲೂಕುಗಳಲ್ಲಿ ಡಿಜಿಟಿಲೀಕರಣ, ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಉಳಿದ 49 ತಾಲೂಕುಗಳನ್ನು ಈ ಕಾರ್ಯಕ್ರಮದಡಿ ಸೇರಿಸಲು ಅನುಮೋದನೆ ನೀಡಬೇಕು ಎಂದು ಕೇಂದ್ರ ಸಚಿವರಿಗೆ ಕೃಷ್ಣಬೈರೇಗೌಡ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net