ಪಠ್ಯಕ್ಕೆ ಮಹಾಕುಂಭ ಸೇರ್ಪಡೆ; ಮೊಘಲರು, ದೆಹಲಿ ಸುಲ್ತಾನರ ಪಾಠಕ್ಕೆ ಕೊಕ್

ncrt
Published on

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್​ಸಿಇಆರ್​ಟಿ) 7ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಮೊಘಲರು ಮತ್ತು ದೆಹಲಿ ಸುಲ್ತಾನರಿಗೆ ಸಂಬಂಧಿಸಿದ ಎಲ್ಲ ಪ್ರಸ್ತಾವನೆಗಳನ್ನು ತೆಗೆದು ಹಾಕಲಾಗಿದೆ. ಅಲ್ಲದೆ ಭಾರತೀಯ ರಾಜವಂಶಗಳು, ‘ಪವಿತ್ರ ಭೂಗೋಳ’, ಮಹಾಕುಂಭ, ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಢಾವೋ ಮುಂತಾದ ಸರ್ಕಾರಿ ಉಪಕ್ರಮಗಳ ವಿಷಯಗಳಿಗೆ ಅದರಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಈ ವಾರ ಬಿಡುಗಡೆ ಮಾಡಲಾದ ಹೊಸ ಪಠ್ಯಪುಸ್ತಕಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಮತ್ತು 2023ರ ರಾಷ್ಟ್ರೀಯ ಶಾಲಾ ಶಿಕ್ಷಣದ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿ ರೂಪಿಸಲಾಗಿದೆ. ಭಾರತೀಯ ಪರಂಪರೆಗಳು, ತತ್ವಶಾಸ್ತ್ರಗಳು, ಜ್ಞಾನ ವ್ಯವಸ್ಥೆಗಳು ಮತ್ತು ಸ್ಥಳೀಯ ವಿಚಾರಗಳನ್ನು ಶಾಲಾ ಶಿಕ್ಷಣದಲ್ಲಿ ಒಳಗೊಳಿಸುವುದಕ್ಕೆ ಅವುಗಳು ಒತ್ತು ನೀಡಿವೆ. ಈಗ ಬಿಡುಗಡೆಯಾಗಿರುವುದು ಮೊದಲ ಭಾಗದ ಪುಸ್ತಕಗಳು ಮಾತ್ರವಾಗಿದ್ದು ಎರಡನೇ ಭಾಗವನ್ನು ಮುಂದಿನ ತಿಂಗಳುಗಳಲ್ಲಿ ಪ್ರಕಟಿಸಲಾಗುತ್ತದೆಂದು ಎನ್​ಸಿಇಆರ್​ಟಿ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಕೈಬಿಟ್ಟಿರುವ ಪಠ್ಯಗಳನ್ನು ಎರಡನೇ ಭಾಗದಲ್ಲಿ ಉಳಿಸಿಕೊಳ್ಳಲಾಗುತ್ತದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ.

ಹಿಂದೆಯೂ ಕತ್ತರಿ: ತುಘಲಕ್, ಖಿಲ್ಜಿಗಳು, ಮಮುಲ್ಕ್​ಗಳು ಮತ್ತು ಲೋಧಿ ಮುಂತಾದ ರಾಜವಂಶಗಳ ವಿವರಗಳ ಸಹಿತ ಮೊಘಲರು ಮತ್ತು ದೆಹಲಿ ಸುಲ್ತಾನರ ಕುರಿತ ವಿಭಾಗಗಳಿಗೆ ಎನ್​ಸಿಇಆರ್​ಟಿ ಈ ಹಿಂದೆಯೇ ಸ್ವಲ್ಪ ಕತ್ತರಿ ಹಾಕಿತ್ತು. 2022-23ರ ಕೋವಿಡ್-19ರ ಸಮಯದಲ್ಲಿ ಪಠ್ಯಕ್ರಮವನ್ನು ಸುಧಾರಿಸುವ ಉದ್ದೇಶದಿಂದ, ಮೊಘಲ್ ಸಮ್ರಾಟರ ಸಾಧನೆಗಳ ಎರಡು ಪುಟಗಳ ಪಟ್ಟಿಯನ್ನು ಕೂಡ ಅದು ಕೈ ಬಿಟ್ಟಿತ್ತು. ಈಗ ಎಲ್ಲ ಅಂಶಗಳಿಗೆ ಕೊಕ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net