

ಚಿತ್ರ: ‘ಅಡವಿಕಟ್ಟೆ’
ನಿರ್ದೇಶನ: ಸಂಜೀವ್ ಗವಂಡಿ
ತಾರಾಗಣ: ಅಭಿಜಿತ್, ಎನ್. ನಾಗರಾಜು, ಯಶ್ ಶಂಕರ್, ಶಾಂತಿ, ಅನು ಪ್ರೇಮಾ ಮುಂತಾದವರು.
ಹೊಸ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಒಂಬತ್ತು ಜನರ ಸ್ನೇಹಿತರ ತಂಡ. ಎಲ್ಲರೂ ಸೇರಿ ಅಡವಿಕಟ್ಟೆ ಎಂಬ ನಿಗೂಢ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಾರೆ. ಆದರೆ, ಒಂಬತ್ತು ಜನರಲ್ಲಿ ಎಂಟು ಜನರು ಒಬ್ಬೊಬ್ಬರಾಗಿ ಕೊಲೆಯಾಗುತ್ತಾರೆ. ಯಾವ ಕಾರಣಕ್ಕಾಗಿ ಕೊಲೆಯಾಗುತ್ತಾರೆ ಹಾಗೂ ಅಡವಿಕಟ್ಟೆ ಕಾಡಿನಲ್ಲಿ ನಿಗೂಢ ಶಕ್ತಿ ಇದೆ ಎನ್ನುವುದನ್ನೇ ನಿರ್ದೇಶಕ ಸಂಜೀವ್ ಗವಂಡಿ ‘ಅಡವಿಕಟ್ಟೆ’ ಮೂಲಕ ನಿರೂಪಿಸಿದ್ದಾರೆ. ಕಥೆಯು ಆರಂಭದಿಂದ ಕೊನೆಯವರೆಗೆ ಒಂದೇ ಕಾಡಿನಲ್ಲಿ ಸಾಗುತ್ತದೆ. ಆದರೆ, ಅಷ್ಟೊಂದು ರೋಚಕತೆ, ತಿರುವು ಏನು ಪಡೆದುಕೊಳ್ಳುವುದಿಲ್ಲ. ಬದಲಾಗಿ ಒಂದೇ ಲೈನ್‌ನಲ್ಲಿ ಕಥೆ ಹೇಳಿ ಮುಗಿಸಲಾಗಿದೆ. ಇನ್ನಷ್ಟು ಗಟ್ಟಿಯಾಗಿ ಕಥೆಯನ್ನು ಕಟ್ಟುವ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ದೃಶ್ಯದಿಂದ ದೃಶ್ಯಕ್ಕೆ ಕಥೆ ಜೋಡಿಸುವಲ್ಲಿ ನಿರ್ದೇಶಕರು ಸೂಕ್ಷ್ಮತೆ ಗಮನಹರಿಸಬೇಕಿತ್ತು.
ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿಜಿತ್ ಯಾವ ಕಾರಣಕ್ಕಾಗಿ ಅಡವಿಕಟ್ಟೆಗೆ ಬರುತ್ತಾರೆ ಎಂಬುದು ಕೊನೆಯವರೆಗೆ ತಿಳಿಯುವುದಿಲ್ಲ. ಅಭಿಜಿತ್ ಪಾತ್ರವನ್ನು ಕಥೆಗೆ ಹೊಂದುವಂತೆ ಇನ್ನಷ್ಟು ಹೆಚ್ಚಿಗೆ ಬಳಸಿಕೊಳ್ಳಬಹುದಿತ್ತು. ಕಲಾ ಬಳಗದಲ್ಲಿರುವ ಎಂಟು ಜನರು ಹೊಸಬರಾಗಿದ್ದು, ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ಕಾಡಿನ ನಿಗೂಢತೆ, ರೋಚಕತೆ, ಕಥೆಯ ಸಾಗುವ ಹಾದಿಯನ್ನು ಛಾಯಾಗ್ರಹಣದಲ್ಲಿ ಇನ್ನಷ್ಟು ಗಟ್ಟಿಯಾಗಿ ಸೆರೆಹಿಡಿಯಬಹುದಿತ್ತು. ಹಿನ್ನೆಲೆ ಸಂಗೀತ, ಸಂಭಾಷಣೆಗೆ ಚಿತ್ರ ತಂಡ ಹೆಚ್ಚು ಒತ್ತು ನೀಡಬೇಕಿತ್ತು.