

ಶಿವಮೊಗ್ಗ: ಅಡಕೆ ಹಾಳೆ ಉತ್ಪನ್ನಗಳ ಮೇಲೆ ಈಗ ಅಮೆರಿಕ ಮಾಡಿರುವ ಪ್ರಹಾರವನ್ನು ತಡೆಯದೇ ಹೋದರೆ ಮುಂದೆ ಖಂಡಿತವಾಗಿಯೂ ಅಡಕೆಗೆ ಉಳಿಗಾಲವಿಲ್ಲ. ಇಂದು ಅಡಕೆ ಹಾಳೆ ಬಗ್ಗೆ ಅಪಪ್ರಚಾರ ಮಾಡಿದವರು ನಾಳೆ ಅಡಕೆಯನ್ನೂ ಅಧೋಗತಿಗೆ ತಳ್ಳುತ್ತಾರೆ ಎಂದು ಕೃಷಿ ವಿಜ್ಞಾನಿ, ರಾಜ್ಯ ನೀತಿ ಹಾಗೂ ಯೋಜನಾ ಆಯೋಗದ ಸದಸ್ಯ ಡಾ. ಪ್ರಕಾಶ್ ಕಮ್ಮರಡಿ ಕಳವಳ ವ್ಯಕ್ತಪಡಿಸಿದರು.
ಅಮೆರಿಕದ ಎಫ್‌ಡಿಎ (ಫುಡ್ ಆ್ಯಂಡ ಡ್ರಗ್ ಅಡ್ಮಿನಿಸ್ಟ್ರೇಷನ್) ಯಾವುದೇ ವೈಜ್ಞಾನಿಕ ಸಂಶೋಧನೆ ನಡೆಸದೆ ಕೇವಲ ಇಂಟರ್‌ನೆಟ್‌ನಲ್ಲಿರುವ ಮಾಹಿತಿ ಆಧರಿಸಿ ಅಡಕೆ ಹಾಳೆಯ ಉತ್ಪನ್ನಗಳಲ್ಲಿ ಮನುಷ್ಯರ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಅಂಶವಿದೆ ಎಂದು ಹೇಳಿರುವುದು ಹಾಸ್ಯಾಸ್ಪದ. ಇದೇ ಕಾರಣಕ್ಕೆ ಉತ್ಪನ್ನಗಳನ್ನು ಬಳಕೆ ಮಾಡದಂತೆ, ಆಮದು ನಿಷೇಧಿಸುವಂತೆ ಅಲ್ಲಿನ ಸರ್ಕಾರಕ್ಕೆ ವರದಿ ನೀಡಿರುವುದು ಖಂಡನೀಯ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ‘ಅಡಕೆ ಉದ್ಯಮದ ಭವಿಷ್ಯ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗ ಎಫ್‌ಡಿಎ ನೀಡಿರುವ ವರದಿ ಅಡಕೆ ಮೇಲಿನ ಅಪಪ್ರಚಾರ, ಪ್ರಹಾರ ಮುಂದುವರಿದ ಭಾಗವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತರ್ಕಬದ್ಧ ವಾಣಿಜ್ಯ ವಹಿವಾಟು ನಡೆಸುತ್ತಿಲ್ಲ ಎಂದು ಟೀಕಿಸಿದರು.
ಅಮೆರಿಕ ಹೊರತುಪಡಿಸಿ ಬೇರೆ ರಾಷ್ಟ್ರಗಳಿಗೆ ಅಡಕೆ ಹಾಳೆಯ ಉತ್ಪನ್ನಗಳನ್ನು ಹೆಚ್ಚು ರಫ್ತು ಮಾಡುವ, ದೇಶದೊಳಗೆ ಇದರ ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸ ತುರ್ತಾಗಿ ನಡೆಯಬೇಕು. ಆಗ ಮಾತ್ರ ಎಫ್‌ಡಿಎ ನೀಡಿರುವ ಆಘಾತದಿಂದ ಸ್ವಲ್ಪ ಚೇತರಿಕೆ ಕಾಣಬಹುದು ಎಂದರು.
ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಶ್ವೇಶ್ವರಯ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ರೈತ ಮುಖಂಡ ದೇವಕುಮಾರ್ ಉಪಸ್ಥಿತರಿದ್ದರು.