19ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಸ್ಟಾರ್​ ನಟಿ ಈಕೆ! ಸೌಂದರ್ಯದಲ್ಲಿ ಶ್ರೀದೇವಿಯನ್ನೇ ಮೀರಿಸಿದವರು | Actress

ವಿಜಯವಾಣಿ - 2025-04-04T101421.023
Published on

Divya Bharati: ಬಣ್ಣದ ಲೋಕವೇ ಒಂದು ರೀತಿ ಮಾಯೆ. ಆರಂಭದಲ್ಲಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಅವಕಾಶ, ಅದೇ ಚಿತ್ರ ಗೆದ್ದ ಮೇಲೆ ಇರುವುದಿಲ್ಲ. ಏಕೆಂದರೆ, ಜನಪ್ರಿಯತೆ ಮತ್ತು ಅಭಿಮಾನಿಗಳ ಬಳಗ ಒಂದು ಬಾರಿ ಸಿಕ್ಕರೆ, ಆ ಕಲಾವಿದರ ಜನ್ಮವೇ ಸಾರ್ಥಕವಾದಂತೆ. ಮುಂದಿನ ಕೆಲಸಗಳೆಲ್ಲವು ಸರಳ, ಸುಂದರ ಎಂದೇ ಹೇಳಬಹುದು. ಸಿನಿಮಾ ಅಂದಮೇಲೆ ಅಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ಛಾಯಾಗ್ರಹಣ ಹೇಗೆ ಮುಖ್ಯವೋ, ಹಾಗೆಯೇ ಆ ಚಿತ್ರದ ನಾಯಕ ಮತ್ತು ನಾಯಕಿ ಕೂಡ ಅಷ್ಟೇ ಮುಖ್ಯ. ಇವರಿಬ್ಬರು ಸಿನಿಮಾದ ಮುಖವಾಣಿ ಇದ್ದಂತೆ. ಅದರಲ್ಲೂ ನಟಿಮಣಿಯರ ಬ್ಯೂಟಿ ಪ್ರೇಕ್ಷಕರನ್ನು ಸೆಳೆದು, ಚಿತ್ರವನ್ನು ಕೊಂಡಾಡುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ನಟಿಯರ (Actress) ಬ್ಯೂಟಿಗೆ ಮನಸೋಲುವ ಪುರುಷ ಸಿನಿಪ್ರೇಮಿಗಳು, ನಾವು ಪ್ರೀತಿಸುವ, ಮದುವೆಯಾಗುವ ಹುಡುಗಿ ಇವರಂತೆ ಇದ್ದರೆ ಎಷ್ಟು ಚೆಂದ ಎಂದು ಆಶಿಸುತ್ತಾರೆ. ಈ ಸಾಲಿನಲ್ಲಿ ಪ್ರಮುಖರಾಗಿದ್ದವರು 90ರ ದಶಕದಲ್ಲಿ ಮಿಂಚಿ, ಕಣ್ಮರೆಯಾದ ಬಾಲಿವುಡ್​ ನಟಿ ದಿವ್ಯಾ ಭಾರತಿ.

90ರ ದಶಕದಲ್ಲಿ ಹಿಂದಿ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ, ಸಿನಿಪ್ರೇಕ್ಷಕರಿಂದ ಸೈಎನಿಸಿಕೊಂಡ ನಟಿ ದಿವ್ಯಾ, ಅಂದಿನ ಕಾಲಘಟ್ಟಕ್ಕೆ ಬಹಳ ಖ್ಯಾತಿ ಗಳಿಸಿದ್ದ ಸೂಪರ್​ ಸ್ಟಾರ್​. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಈ ನಟಿ, ಬಾಲಿವುಡ್​ ಅಂಗಳದಲ್ಲಿ ‘ಜೂನಿಯರ್ ಶ್ರೀದೇವಿ’ ಎಂದೇ ಹೆಸರು ದಾಖಲಿಸಿದ್ದರು. ಅಲ್ಪಾವಧಿಯಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತಮ್ಮ ಬ್ಯೂಟಿ ಹಾಗೂ ನಟನೆಯಿಂದಲೇ ಸಂಪಾದಿಸಿದ್ದ ದಿವ್ಯಾ, ಇನ್ನೇನು ಭಾರತೀಯ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರನ್ನು ಗಳಿಸಿ, ಸ್ಟಾರ್​ ನಟಿಯಾಗಿ ಚಿತ್ರರಂಗವನ್ನು ಆಳಲಿದ್ದಾರೆ ಎಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದ ವೇಳೆಯೇ ದುರಂತ ಅಂತ್ಯ ಕಂಡಿದ್ದು, ಇಂದಿಗೂ ಮರೆಯಲಾಗದ ಕ್ಷಣ ಎಂದೇ ಅಭಿಮಾನಿಗಳು ಭಾವಿಸುತ್ತಾರೆ.

ಜೂನಿಯರ್​ ಶ್ರೀದೇವಿ ಬಿರುದು ತಿರಸ್ಕಾರ

ತಮ್ಮ ಮುಗ್ಧ ನಗು, ದುಂಡು ಮುಖ, ಸರಳ ಅಭಿನಯದಿಂದಲೇ 90ರ ದಶಕದಲ್ಲಿ ಅಪಾರ ಜನಮನ್ನಣೆ ಸ್ವೀಕರಿಸಿದ ದಿವ್ಯಾ ಭಾರತಿಯನ್ನು ಸಿನಿಪ್ರೇಕ್ಷಕರು ಜೂನಿಯರ್​ ಶ್ರೀದೇವಿ ಎಂಬ ಪಟ್ಟ ನೀಡಿ, ಕೊಂಡಾಡಿದ್ದರು. ಇದನ್ನು ಖುಷಿಯಿಂದ ಒಪ್ಪಿಕೊಳ್ಳದ ದಿವ್ಯಾ, ಇದನ್ನು ನಾನು ಗೌರವ, ಮೆಚ್ಚುಗೆ ಅಥವಾ ಅಭಿಮಾನ ಎಂದು ಸ್ವೀಕರಿಸುವುದಿಲ್ಲ. ಏಕೆಂದರೆ, ಶ್ರೀದೇವಿ ಅವರು ದೊಡ್ಡವರು. ಅವರನ್ನು ನಾವು ನೋಡಿ ಕಲಿಯುತ್ತಿದ್ದೇವೆ. ಹೀಗಿರುವಾಗ ಇಂತಹ ದೊಡ್ಡ ಮಾತುಗಳನ್ನು ಸ್ವೀಕರಿಸುವುದು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ, ಶ್ರೀದೇವಿ ಮೇಲೆ ತಮಗಿದ್ದ ಗೌರವವನ್ನು ಎತ್ತಿಹಿಡಿದರು.

ಅಷ್ಟಕ್ಕೂ ಆಗಿದ್ದೇನು?

ಮುಂಬೈನ ಐದನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ದಿವ್ಯಾ, ಅಂದು ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿ, ಮುಂಬೈಗೆ ವಾಪಾಸ್​ ಆಗಿದ್ದರು. ಈ ವೇಳೆ ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ಅವರನ್ನು ಭೇಟಿ ಮಾಡುವ ಸಲುವಾಗಿ, ಅವರನ್ನೇ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ದಿವ್ಯಾ, ಬಾಲ್ಕನಿಯಲ್ಲಿದ್ದ ಟೇಬಲ್​ ಮೇಲೆ ಕುಳಿತುಕೊಳ್ಳುವಾಗ ಆಯಾತಪ್ಪಿ ಕೆಳಗೆ ಬಿದ್ದ ಕಾರಣ, ಮಿದುಳಿನಲ್ಲಿ ತೀವ್ರ ಆಂತರಿಕ ರಕ್ತಸ್ರಾವವಾಗಿ ದುರಂತ ಅಂತ್ಯ ಕಂಡರು ಎಂದು ವರದಿಯಾಗಿದೆ. ಕೆಲವರು ಇದು ಆತ್ಮಹತ್ಯೆ ಎಂದು ಹೇಳಿದರೆ, ಇನ್ನೂ ಕೆಲವರು ಇದೊಂದು ಪೂರ್ವನಿಯೋಜಿತ ಹತ್ಯೆ ಎನ್ನುತ್ತಾರೆ. ಈಗಲೂ ಆಕೆಯ ಸಾವು ಒಂದು ಬಿಡಿಸಲಾಗದ ಕಗ್ಗಂಟು ಎಂದೇ ಅನೇಕರು ನಂಬುತ್ತಾರೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿದ ನಟಿಯ ತಂದೆ, ಇದೆಲ್ಲಾ ಸುಳ್ಳು, ಅಲ್ಲಿ ನಡೆದಿದ್ದು ಇಷ್ಟೇ ಎಂದು ಘಟನೆಯನ್ನು ಈ ರೀತಿ ವಿವರಿಸಿದ್ದಾರೆ.

ದಿವ್ಯಾ ಭಾರತಿ ತಂದೆ ಹೇಳಿದ್ದೇನು?

ಮಗಳ ಸಾವಿನ ಸುತ್ತು ಹುಟ್ಟಿಕೊಂಡಿದ್ದ ಅನುಮಾನಗಳ ಹುತ್ತವನ್ನು ಒಡೆದು ಹಾಕಿದ ದಿವ್ಯಾರ ತಂದೆ, “ಇಲ್ಲಿ ಆತ್ಮಹತ್ಯೆ ಅಥವಾ ಕೊಲೆಯ ಪ್ರಶ್ನೆಯೇ ಇಲ್ಲ. ಹೌದು, ಅವಳು ಸ್ವಲ್ಪ ಮದ್ಯಪಾನ ಮಾಡಿದ್ದಳು. ಆದರೆ, ಕೇವಲ ಅರ್ಧ ಗಂಟೆಯಲ್ಲಿ ಆಕೆ ಎಷ್ಟು ಕುಡಿದಿರಬಹುದು? ಕುಡಿಯಲು ಸಾಧ್ಯ? ಆಕೆ ಯಾವುದೇ ಖಿನ್ನತೆಗೆ ಒಳಗಾಗಿರಲಿಲ್ಲ. ಬದಲಿಗೆ ಅವಳೇ ಬೇರೆಯವರಿಗೆ ಖಿನ್ನತೆಯನ್ನು ನೀಡುವ ರೀತಿ ಇದ್ದವಳು! ಅದೊಂದು ಅಪಘಾತ. ಕಟ್ಟೆಯ ಮೇಲೆ ಕುಳಿತುಕೊಳ್ಳುವಾಗ ಆಯಾತಪ್ಪಿ ಬಿದ್ದಳು. ದುಃಖಕರ ವಿಷಯ ಏನೆಂದರೆ, ಎಲ್ಲಾ ಫ್ಲಾಟ್‌ಗಳ ಬಾಲ್ಕನಿಯಲ್ಲಿ ಗ್ರಿಲ್ ವ್ಯವಸ್ಥೆಯಿತ್ತು. ಆದ್ರೆ, ಪುತ್ರಿಯಿದ್ದ ಬಾಲ್ಕನಿಯಲ್ಲಿ ಇರಲಿಲ್ಲ. ಅಂದು ಆಕೆ ಬಿದ್ದ ಜಾಗದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರುಗಳು ಕೆಳಗೆ ನಿಲ್ಲುತ್ತಿದ್ದವು. ಆದರೆ ಆ ದಿನ ಒಂದೇ ಒಂದು ಕಾರು ಸಹ ಇರಲಿಲ್ಲ. ಹಾಗಾಗಿಯೇ ಆಕೆ ನೇರವಾಗಿ ನೆಲದ ಮೇಲೆ ಬಿದ್ದು ಸಾವನ್ನಪ್ಪಿದಳು” ಎಂದು ಕಣ್ಣೀರಿಟ್ಟರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net