

Actress Talk: ಒಂದು ಚಿತ್ರರಂಗ ಅಂದಮೇಲೆ ಅಲ್ಲಿ ಸೂಪರ್ಹಿಟ್ ಚಿತ್ರಗಳ ಮಾತು, ಕಲಾವಿದರಿಗೆ ಮೆಚ್ಚುಗೆ, ಪ್ರಶಂಸನೀಯ ಮಾತುಗಳು ಚರ್ಚೆ ಹುಟ್ಟಿಹಾಕುತ್ತವೆ. ಅದೇ ರೀತಿ ಭುಗಿಲೇಳುವ ಸ್ಫೋಟಕ ಸಂಗತಿಗಳು, ವಿವಾದಗಳು ಮತ್ತು ಆರೋಪಗಳು ಕೂಡ ದೊಡ್ಡ ಮಟ್ಟದ ಚರ್ಚೆಗೆ ಗುರಿಯಾಗಿ, ಹಲವರ ಕಣ್ತರೆಸುವ ಕೆಲಸ ಮಾಡುತ್ತವೆ. ಅಸಲಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದೇನು ಹೊಸತಲ್ಲ.
ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಸೇರಿದಂತೆ ಹಲವು ನಟರಿಂದ ತಮಗಾದ ಕೆಲವು ಕೆಟ್ಟ ಸಂದರ್ಭಗಳು, ಮುಜುಗರ ಉಂಟು ಮಾಡುವ ಸನ್ನಿವೇಶಗಳನ್ನು ನಟಿಮಣಿಯರು ಬಹಿರಂಗ ಪಡಿಸಿದ್ದಾರೆ. ಇದಕ್ಕೆ ಅನೇಕ ನಿದರ್ಶನಗಳಿವೆ. ಈ ಸಾಲಿಗೆ ಇದೀಗ ಮಲಯಾಳಂ ನಟಿಯೊಬ್ಬರು ಸೇರ್ಪಡೆಗೊಂಡಿದ್ದಾರೆ. ಒಬ್ಬ ಸ್ಟಾರ್ ನಟನೊಂದಿಗೆ ಕೆಲಸ ಮಾಡುವಾಗ ತನಗಾದ ಕಹಿ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿರುವ ವಿನ್ಸಿ ಅಲೋಶಿಯಸ್, ಡ್ರಗ್ಸ್ ಸೇವಿಸಿ ಚಿತ್ರೀಕರಣದಲ್ಲಿ ಭಾಗಿಯಾದ ನಟನ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಹಲವಾರು ಮಲಯಾಳಂ ಚಿತ್ರಗಳಲ್ಲಿ ತನ್ನ ನಟನಾ ಛಾಪು ಮೂಡಿಸಿ, ಸಿನಿಪ್ರೇಕ್ಷಕರಿಂದ ಸೈ ಎನಿಸಿಕೊಂಡಿರುವ ವಿನ್ಸಿ ಸೋನಿ, "ಇತ್ತೀಚೆಗೆ ನಡೆದ ಒಂದು ಚಿತ್ರದ ಚಿತ್ರೀಕರಣದ ಸಮಯ. ಆತ ಓರ್ವ ಸ್ಟಾರ್ ನಟ. ಅವರ ಸಿನಿಮಾದಲ್ಲಿ ನಾನು ಸಹ ಕೆಲಸ ಮಾಡಿದೆ. ಶೂಟಿಂಗ್ ನಡೆಯುವಾಗ ನನ್ನ ಡ್ರೆಸ್ ಸ್ವಲ್ಪ ವಿಚಿತ್ರವಾಗಿತ್ತು. ಕೂಡಲೇ ಅದನ್ನು ಸರಿಪಡಿಸಿಕೊಳ್ಳಲು ನಾನು ಕ್ಯಾರವಾನ್ ಕಡೆಗೆ ಹೋಗುತ್ತಿದ್ದೆ. ಆಗ ನಾನು ಕೂಡ ಒಳಗೆ ಬರ್ತಿನಿ, ಸರಿ ಮಾಡೋಣ ಎಂದ. ಆತನ ಈ ನಡೆ ನನಗೆ ಕಿಂಚಿತ್ತು ಇಷ್ಟವಾಗಲಿಲ್ಲ. ಚಿತ್ರೀಕರಣದ ವೇಳೆ ನಟನ ಬಾಯಿಯಿಂದ ಆಕಸ್ಮಿಕವಾಗಿ ಬಿಳಿ ವಸ್ತು ಹೊರಬೀಳುತ್ತಿತ್ತು. ಅಸಲಿಗೆ ಅದು ಡ್ರಗ್ಸ್ ಎಂಬುದು ಖಚಿತವಾಯಿತು" ಎಂದಿದ್ದಾರೆ.
"ಇದೆನ್ನೆಲ್ಲ ನೋಡಿದ ಬಳಿಕ ಇನ್ಯಾವತ್ತು ಇಂತಹ ಡ್ರಗ್ಸ್ ವ್ಯಸನಿಗಳೊಂದಿಗೆ ನಟಿಸಬಾರದು ಎಂದು ದೃಢವಾಗಿ ನಿರ್ಧರಿಸಿದ್ದೀನಿ. ಆ ದಿನ ಸೆಟ್‌ನಲ್ಲಿ ನಡೆದದ್ದು ಅಹಿತಕರ ಅನುಭವ" ಎಂದು ತಮ್ಮ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ವಿನ್ಸಿ ವಿವರಿಸಿದ್ದಾರೆ. 2019ರಲ್ಲಿ 'ವಿಕೃತಿ' ಚಿತ್ರದ ಮೂಲಕ ತೆರೆಯಲ್ಲಿ ಮಿಂಚಿದ ವಿನ್ಸಿ, ನಂತರ 'ರೇಖಾ', 'ಜನಗಣಮನ', 'ಸೌದಿ ವೆಲಿಕ್ಕ', 'ಪದ್ಮಿನಿ', 'ಪಲಜನ್ ಪ್ರಾಣಾಯಂ' ಸೇರಿದಂತೆ ಒಂದಷ್ಟು ಚಿತ್ರಗಳಿಂದ ಮನ್ನಣೆ ಪಡೆದಿದ್ದಾರೆ.
ತಮಗಾದ ಕಹಿ ಅನುಭವ ಹಂಚಿಕೊಂಡ ನಟಿ, ಎಲ್ಲಿಯೂ ಆ ಸ್ಟಾರ್ ನಟ ಯಾರು ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ,(ಏಜೆನ್ಸೀಸ್).