ದಸರಾ ವೈಭವದ ತೇಜಸ್ಸು: ಕೊಡಗು ಮೂಲದ ನಟಿ ತೇಜಸ್ವಿನಿ ಶರ್ಮಾ ನವರಾತ್ರಿ ಆಚರಣೆಯ ಕಳೆ

teju 2
Published on


ಬೆಂಗಳೂರು: ಕನ್ನಡದ ‘ಮೇರಿ’, ‘ಇಂಗ್ಲೀಷ್ ಮಂಜ’ ಖ್ಯಾತಿಯ ನಟಿ ತೇಜಸ್ವಿನಿ ಶರ್ಮಾಗೆ ಮಡಿಕೇರಿ ಹಾಗೂ ಮೈಸೂರು ದಸರಾದ ನಂಟು ಮೊದಲಿನಿಂದಲೂ ಇದೆ. ಅವರು ಮೂಲತಃ ಕೊಡಗಿನವರಾಗಿದ್ದು, ಚಿಕ್ಕಂದಿನಿಂದಲೂ ಮಡಿಕೇರಿ ದಸರಾವನ್ನು ಕಣ್ತುಂಬಿಕೊಂಡೆ ಬೆಳೆದಿದ್ದಾರೆ. ಇನ್ನು, ಓದಿದ್ದು ಮೈಸೂರಿನಲ್ಲಿ. ಹೀಗಾಗಿ ಅವರಿಗೆ ಮೈಸೂರು ದಸರಾದ ಅವಿಸ್ಮರಣೀಯ ನೆನಪುಗಳಿವೆ. ಸದ್ಯ ಮಾಡೆಲಿಂಗ್ ಹಾಗೂ ಎರಡು ಸಿನಿಮಾಗಳಲ್ಲಿ ಬಿಜಿ ಇರುವ ಅವರಿಗೆ ಈ ಬಾರಿಯ ದಸರಾ ವಿಶೇಷವಾಗಿದೆ. ‘ನಮ್ಮ ಕುಟುಂಬದವರೆಲ್ಲರೂ ದೇವಿ ಭಕ್ತರಾಗಿದ್ದು, ಶ್ರದ್ಧೆಯಿಂದ ನವರಾತ್ರಿ ಆಚರಿಸುತ್ತೇವೆ. ಪ್ರತಿ ವರ್ಷವೂ ನಾನು ಹಬ್ಬದಲ್ಲಿ ಆ ದಿನದ ಬಣ್ಣದ ಸೀರೆ ಧರಿಸಿ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತೇನೆ. ಒಂಬತ್ತು ದಿನಾನೂ ಧ್ಯಾನ ಮಾಡುತ್ತೇನೆ. ಹಣ್ಣುಗಳನ್ನಷ್ಟೇ ಸೇವಿಸುತ್ತೇನೆ. ಈ ಬಾರಿ ಹಬ್ಬದ ಮೊದಲ ದಿನವೇ ನನಗೆ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಸಿಕ್ಕಿರುವುದು ಪುಣ್ಯ ಎಂದು ಭಾವಿಸುವೆ. ನಂತರ ನಾಲ್ಕು ದಿನ ಊರಿನಲ್ಲಿದ್ದು ಅಲ್ಲಿ ಹಬ್ಬ ಆಚರಿಸಿದೆ. ಸದ್ಯ ಎರಡು-ಮೂರು ದಿನದಿಂದ ಬೆಂಗಳೂರಿನಲ್ಲಿದ್ದೇನೆ. ಶೂಟಿಂಗ್ ಜತೆ ಜತೆ ಹಬ್ಬ ನಡೆಯುತ್ತಿದೆ’ ಎನ್ನುತ್ತಾರೆ.

ನಮ್ಮೂರು ಹಬ್ಬ ನಮಗೆ ವಿಶೇಷ: ಮಡಿಕೇರಿ ದಸರಾದ ವಿಶೇಷತೆ ಕುರಿತು ತೇಜಸ್ವಿನಿ ಶರ್ಮಾ, ‘ಮಡಿಕೇರಿಯಲ್ಲೂ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ಬಹುತೇಕರು ಮೈಸೂರು ದಸರಾ ಮುಗಿಸಿಕೊಂಡು ಮಡಿಕೇರಿ ದಸರಾ ವೀಕ್ಷಿಸಲು ಆಗಮಿಸುತ್ತಾರೆ. ಇಡೀ ರಾತ್ರಿ ಹಬ್ಬದ ವೈಭವ ಕಾಣಬಹುದು. ದೇವಿಯ ಒಂಬತ್ತು ಅವತಾರಗಳನ್ನು ಟ್ಯಾಬ್ಲೋ ಮೂಲಕ ಪ್ರದರ್ಶಿಸುತ್ತಾರೆ. ಅದನ್ನು ನೋಡುವುದೇ ಚೆಂದ. ಇನ್ನು, ಸೀ ಶಕ್ತಿಯ ಮೇಲೆ ನನಗೆ ತುಂಬಾ ನಂಬಿಕೆಯಿದೆ. ಹಾಗಾಗಿ ಈ ನವರಾತ್ರಿಯಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಮುಂದಾಗಬೇಕು. ಸಮಾಜದಲ್ಲಿ ಹೇಗೆ ದೇವಿಯನ್ನು ತಾಯಿ ಹಾಗೂ ವಿವಿಧ ರೂಪದಲ್ಲಿ ಕಾಣುತ್ತಾರೋ ಹಾಗೆಯೇ ಪ್ರತಿ ಹೆಣ್ಣುಮಕ್ಕಳಲ್ಲಿ ದೇವಿ ಕಾಣಬೇಕು’ ಎಂದು ಆಶಿಸುತ್ತಾರೆ

ಮೈಸೂರು ದಸರಾ ಎಷ್ಟೊಂದು ಸುಂದರ: ತೇಜಸ್ವಿನಿ ಶರ್ಮಾಗೆ ಮೊದಲಿನಿಂದಲೂ ಮೈಸೂರು ದಸರಾದ ನಂಟಿದೆ. ಈ ಬಗ್ಗೆ, ‘2015 ಹಾಗೂ 2016ರಲ್ಲಿ ನಾನು ಯುವ ದಸರಾದಲ್ಲಿ ನೃತ್ಯ ಪ್ರದರ್ಶನ ಮಾಡಿದ್ದೆ. 2018ರಲ್ಲಿ ರ‌್ಯಾಂಪ್‌ವಾಕ್ ಮಾಡಿದ್ದೆ. ಈ ವೇದಿಕೆ ನಮ್ಮದೇ ವೇದಿಕೆ ಎಂಬಂತಾಗಿತ್ತು. ಈ ಮೂರು ಕಾರ್ಯಕ್ರಮದ ಬಳಿಕವೇ ನಾನು ಚಿತ್ರರಂಗಕ್ಕೆ ಕಾಲಿಟ್ಟೆ ಎಂಬುದು ಸಂತೋಷದ ಸಂಗತಿ. ಈ ಬಾರಿ ಶೂಟಿಂಗ್ ಬಿಜಿ ಇರುವ ಕಾರಣ ಮೈಸೂರು ದಸರಾಕ್ಕೆ ತೆರಳಲು ಆಗುತ್ತಿಲ್ಲ’ ಎನ್ನುತ್ತಾರೆ.

‘ಫುಲ್‌ಮೀಲ್ಸ್’ ಸವಿಯಲು ಸಿದ್ಧ: ತೇಜಸ್ವಿನಿ ಶರ್ಮಾ ಮಾಡೆಲಿಂಗ್ ಜತೆಗೆ ಸಿನಿಮಾ ರಂಗದಲ್ಲಿ ಕೂಡ ಬಿಜಿ ಇದ್ದಾರೆ. ಸದ್ಯ ಅವರು ನಟಿಸಿರುವ ಲಿಖಿತ್ ಶೆಟ್ಟಿ ನಾಯಕನಾಗಿರುವ ಫುಲ್ ಮೀಲ್ಸ್’ ಶೂಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇನ್ನು, ವಶಿಷ್ಠ ಸಿಂಹ ನಟಿಸುತ್ತಿರುವ ಹೊಸ ಸಿನಿಮಾ ‘ವಿಐಪಿ’ಯಲ್ಲಿ ತೇಜಸ್ವಿನಿ ಮುಖ್ಯಭೂಮಿಕೆಯಲ್ಲಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ‘ಈ ಎರಡು ಸಿನಿಮಾಗಳ ಜತೆ ಕನ್ನಡ ಹಾಗೂ ಬೇರೆ ಭಾಷೆಗಳ ಎರಡು-ಮೂರು ಕಥೆಗಳನ್ನು ಕೇಳಿದ್ದೇನೆ. ಅವು ಮಾತುಕತೆ ಹಂತದಲ್ಲಿವೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net