

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ 'ನನ್ನಮ್ಮ ಸೂಪರ್ಸ್ಟಾರ್' ಅಂತಿಮ ಘಟ್ಟವನ್ನು ತಲುಪಿದ್ದು, ಯಾರು ವಿಜೇತರಾಗಿ ಹೊರಹೊಮ್ಮಲಿದ್ದಾರೆ ಎಂಬ ಪ್ರಶ್ನೆ ಸದ್ಯ ವೀಕ್ಷಕರಲ್ಲಿ ಮೂಡಿದೆ. ಇನ್ನು ಈ ಮಧ್ಯೆ ನನ್ನಮ್ಮ ಸೂಪರ್ಸ್ಟಾರ್ ಚಿತ್ರೀಕರಣದ ಸೆಟ್ಗೆ ದಿಢೀರ್ ಭೇಟಿ ಕೊಟ್ಟ ವಿಜಯವಾಣಿ ತಂಡ, ಕಾರ್ಯಕ್ರಮದ ತೀರ್ಪುಗಾರರಾದ, ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧ ಅವರನ್ನು ಮಾತನಾಡಿಸಿತು. ಈ ವೇಳೆ ಅವರು ಹಂಚಿಕೊಂಡ ಕೆಲವು ಮನದಾಳದ ಮಾತುಗಳು ಹೀಗಿವೆ.
"ನನಗೆ ಮತ್ತೊಂದು ಹೆಸರು ಕೊಟ್ಟಿದ್ದು, ಈ ಕಾರ್ಯಕ್ರಮ. ಈಗಂತೂ ಎಲ್ಲರೂ ನನ್ನನ್ನು ತಾರಾ, ತಾರಾ ಅನುರಾಧ ಅಂತ ಕರೆಯುವುದನ್ನೇ ಬಿಟ್ಟಿದ್ದಾರೆ. ಅದರ ಬದಲಿಗೆ ತಾರಮ್ಮ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಅದು ನನಗೆ ಬಹಳ ಸಂತೋಷ ಉಂಟುಮಾಡಿದೆ. ಒಬ್ಬರನ್ನು ಜಡ್ಜ್ ಮಾಡುವುದೇ ಕಷ್ಟಕರ. ಅದರಲ್ಲೂ ಜಡ್ಜ್ ಸ್ಥಾನದಲ್ಲಿ ಕೂತು ಹೇಳುವುದು ಬಹಳ ಕಷ್ಟ" ಎಂದು ಹೇಳಿದರು.
"ವಿಜಯವಾಣಿ ಪತ್ರಿಕೆ ಆರಂಭವಾದ ದಿನದಿಂದಲೂ ನಾನು ಅವರ ಜತೆ ಇದ್ದೀನಿ, ಅವರು ನನ್ನೊಟ್ಟಿಗೆ ಇದ್ದಾರೆ. ಇದು ಕೇವಲ ನನ್ನ ಮನೆಯ ಪತ್ರಿಕೆ ಮಾತ್ರವಲ್ಲ, ನನ್ನ ಮನಸ್ಸಿನ ಪತ್ರಿಕೆ. ಆ ಪತ್ರಿಕೆಯವರು ಇವತ್ತು ನನ್ನ ಮಾತನಾಡಿಸಲು ಬಂದದ್ದು, ನಿಜಕ್ಕೂ ನನ್ನ ತವರು ಮನೆಯಿಂದಲೇ ಯಾರೋ ಒಬ್ಬರು ಬಂದಷ್ಟೇ ಖುಷಿಯಾಯಿತು" ಎಂದು ಸಂತಸ ಹಂಚಿಕೊಂಡರು.