

ಮುಂಬೈ: ಅನೇಕ ಆ್ಯಕ್ಷನ್ ಸಿನಿಮಾಗಳಲ್ಲಿ ಅತ್ಯುತ್ತಮ ನಟನೆ ತೋರಿ ಜನಪ್ರಿಯತೆ ಗಳಿಸಿರುವ ನಟಿ, ತಾಪ್ಸೀ ಪನ್ನು. ಇತ್ತೀಚೆಗೆ ಬಾಲಿವುಡ್ ಸುದ್ದಿ ಕೇಂದ್ರಿತ ಟ್ವಿಟರ್ ಖಾತೆಯೊಂದು ಅವರು ಗಂಡಸಿನ ದೇಹ ಹೊಂದಿರುವರೆಂಬ ಕಾಮೆಂಟ್ ಮಾಡಿತ್ತು. ಈ ಕಾಮೆಂಟನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ನಟಿಯು, ಧನ್ಯವಾದ ಹೇಳಿದ್ದಾರೆ. ಈ ರೀತಿಯ ಶ್ಲಾಘನೆಗಾಗಿ ನಾನು ಬಹಳ ಕಷ್ಟಪಟ್ಟಿದ್ದೇನೆ ಎಂದಿದ್ದಾರೆ!
'ರಶ್ಮಿ ರಾಕೆಟ್' ಎಂಬ ಕ್ರೀಡಾ ಪ್ರಧಾನ ಚಿತ್ರದಲ್ಲಿ ಓಟಗಾರ್ತಿಯ ಪಾತ್ರ ನಿರ್ವಹಿಸುತ್ತಿರುವ ತಾಪ್ಸೀ ಅವರನ್ನು ಹಿಂದಿನಿಂದ ತೋರಿಸುವ ಚಿತ್ರವೊಂದು ಇತ್ತೀಚೆಗೆ ಹೊರಬಿದ್ದಿತ್ತು. ಈ ಬಗ್ಗೆ ಬಾಲಿವುಡ್ ಕಿ ನ್ಯೂಸ್ ಎಂಬ ಟ್ವಿಟರ್ ಖಾತೆಯಲ್ಲಿ 'ಈ ಗಂಡಸಿನ ದೇಹ ಹೊಂದಿರುವವಳು ತಾಪ್ಸೀನೇ ಆಗೋಕೆ ಸಾಧ್ಯ' ಎಂದು ಟ್ವೀಟ್ ಮಾಡಿತ್ತು.
ಇದಕ್ಕೆ ಉತ್ತರಿಸಿರುವ ತಾಪ್ಸೀ, "ನಾನು ಹೇಳೋದಿಷ್ಟೇ... ಈ ಲೈನನ್ನು ನೆನಪಿಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್ 23ಕ್ಕಾಗಿ ಕಾಯಿರಿ. ಹಾಗೂ ನಿಮಗೆ ಮುಂಗಡವಾಗಿ ಥ್ಯಾಂಕ್ಯೂ ... ಏಕೆಂದರೆ ನಾನು ಈ ಹೊಗಳಿಕೆಗಾಗಿ ತುಂಬಾ ಕಷ್ಟ ಪಟ್ಟಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಆಕರ್ಷ್ ಖುರಾನಾ ನಿರ್ದೇಶಿಸಿರುವ ರಶ್ಮಿ ರಾಕೆಟ್ ಚಿತ್ರಕ್ಕಾಗಿ ತೀವ್ರ ತೆರನ ಫಿಟ್ನೆಸ್ ರುಟೀನ್ ಕೈಗೊಂಡಿದ್ದ ತಮ್ಮ ಫೋಟೋಗಳನ್ನು ಈ ಮುನ್ನ ತಾಪ್ಸೀ ಶೇರ್ ಮಾಡಿದ್ದರು. ಆ ಚಿತ್ರ ಅಕ್ಟೋಬರ್ 15ಕ್ಕೆ ಜೀ5ನಲ್ಲಿ ತೆರೆಕಾಣಲಿದೆ. ಹೀಗಾಗಿ ಸೆ.23ಕ್ಕೆ ಏನು ವಿಶೇಷ ಎಂದು ಸಿನಿ ಆಸಕ್ತರು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್)