

ಬೆಂಗಳೂರು: ಮೊನ್ನೆ ಬೆಳಗ್ಗೆ, ಬ್ಯಾಂಕಾಕ್ನಲ್ಲಿದ್ದ ಸ್ಪಂದನಾ ಹೃದಯಾಘಾತದಿಂದಾಗಿ ಮೃತಪಟ್ಟಿದ್ದು ಇಡೀ ಸ್ಯಾಂಡಲ್ವುಡ್ಗೆ ಆಘಾತಕಾರಿ ಸಂಗತಿಯಾಗಿದೆ. ಇದು ದೊಡ್ಮನೆಯಲ್ಲಿ ಎರಡನೇ ಸಾವಾಗಿದ್ದು, ಅಪ್ಪು ಸಾವನ್ನು ಮರೆಯುವ ಮುನ್ನವೇ ಸ್ಪಂದನಾ ಮೃತಪಟ್ಟಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
ಕೆಲ ದಿನಗಳ ಹಿಂದಷ್ಟೇ ವಿಜಯ್ ತಮ್ಮನ್ನು ಡಿನ್ನರ್ಗೆ ಕರೆದಿದ್ದನ್ನು ನೆನೆದು ಪ್ರಿಯಾಂಕ್ ಖರ್ಗೆ ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಸಂದರ್ಭ ಅವರು ಹಾಗೂ ವಿಜಯ್ ಯಾವ ರೀತಿ ಒಟ್ಟಿಗೇ ಓದಿ ಬೆಳೆದವರು ಎನ್ನುವುದನ್ನು ತಿಳಿಸಿದ್ದರು.
ಈ ನಡುವೆ ಸ್ಪಂದನಾ ಅಂತಿಮ ದರ್ಶನ ಪಡೆಯಲು ಅನೇಕ ಗಣ್ಯರು ಆಗಮಿಸುತ್ತಿದ್ದು ಸಂತಾಪ ಸೂಚಿಸುತ್ತಿದ್ದಾರೆ. ಕೊನೆಯ ಬಾರಿಗೆ ವಿದಾಯ ಹೇಳಲು ಆಗಮಿಸಿದ ನಟಿ ಸುಧಾರಾಣಿ ಹೇಳಿಕೆ ನೀಡಿದ್ದು "ಏನ್ ಹೇಳೋದು ತುಂಬ ಬೇಜಾರಿನ ಸಂಗತಿ. ಒಳ್ಳೆ ಸಂಸ್ಕೃತಿ ಇರುವ ದಂಪತಿಗಳು ಅವರು. ಅವರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ? ಅವರ ಮಗು ಇನ್ನು ಚಿಕ್ಕದ್ದು. ಸ್ಪಂದನಾ ಎಲ್ಲೆ ಸಿಕ್ಕರು ತುಂಬ ಚೆನ್ನಾಗಿ ಮಾತಾಡುತ್ತಿದ್ದರು. ಅವರು ಹೋದ ತಿಂಗಳಷ್ಟೇ ಸಿಕ್ಕಿದ್ದರು.
ಒಳ್ಳೆ ಹುಡುಗಿ ಅವಳು. ಸ್ಪಂದನ ಸಾವನ್ನು ನಂಬೊಕೆ ಆಗ್ತಿಲ್ಲ. ಈ ನೋವು ಭರಿಸುವ ಶಕ್ತಿಯನ್ನು ಆ ದೇವರು ಈ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಈ ನಡುವೆ ವಿಜಯರಾಘವೇಂದ್ರ, ತಮ್ಮ ಪತ್ನಿಯ ಬಳಿಯಲ್ಲೇ ಮಂಕಾಗಿ ಕುಳಿತುಕೊಂಡಿದ್ದರು. ಕಣ್ಣಲ್ಲಿ ನೀರು ತುಂಬಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಯಾರಾದರು ಅಗತ್ಯ ಕೆಲಸ ನಿಮಿತ್ತ ಮಾತನಾಡಿಸಿದರೆ ಮಾತ್ರವೇ ಮುಖ ಭಾವ ಬದಲಾಗುತ್ತಿದೆ. ತಮ್ಮ ಅರ್ಧಾಂಗಿನಿ, ಅಂದರೆ ಅರ್ಧ ಜೀವದಂತೆಯೇ ಇದ್ದ ಸ್ಪಂದನಾರ ನೆನಪಲ್ಲಿ ವಿಜಯ್ ಮುಳುಗಿರುವುದು ಕಂಡುಬಂತು...