

Plastic Surgery: ತಮಿಳಿನ 'ಓ ಕಾದಲ್ ಕಣ್ಮಣಿ' (2015) ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನಟಿ ಪವಿತ್ರಲಕ್ಷ್ಮಿ, ತನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಇದೀಗ ತೀವವ್ರ ಕಿಡಿಕಾರಿದ್ದಾರೆ.
ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಹಿನ್ನೆಲೆ ನೋಡಲು ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದೆಲ್ಲವೂ ಕಾಸ್ಮೆಟಿಕ್ ಸರ್ಜರಿ ಪ್ರಭಾವ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ತನ್ನ ವಿರುದ್ಧ ಕೇಳಿಬಂದ ಸುಳ್ಳು ಸುದ್ದಿ, ಟ್ರೋಲ್, ಟೀಕೆಗಳಿಗೆ ಕಡೆಗೂ ಪ್ರತಿಕ್ರಿಯಿಸಿರುವ ಪವಿತ್ರಲಕ್ಷ್ಮಿ, "ನನ್ನ ದೇಹದಲ್ಲಿ ಆದ ಬದಲಾವಣೆ ಮತ್ತು ತೂಕ ಹೆಚ್ಚಳದಿಂದಾಗಿ ಕೆಲವರು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ಇದು ನಿಜವಲ್ಲ. ಪ್ಲಾಸ್ಟಿಕ್ ಸರ್ಜರಿಯಿಂದ ಹೀಗಾಗಿಲ್ಲ. ಈ ಹಿಂದೆಯೂ ಹಲವು ಬಾರಿ ಇದನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಪ್ಲಾಸ್ಟಿಕ್ ಸರ್ಜರಿಗೆ ನಾನೆಂದಿಗೂ ಒಳಗಾಗಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ" ಎಂದಿದ್ದಾರೆ.
"ಸುಖಾಸುಮ್ಮನೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಕೆಲವು ಕಾಮೆಂಟ್ಗಳು ತುಂಬಾ ಕೆಟ್ಟದಾಗಿದ್ದು, ಅದನ್ನು ಹೇಳಲು ಕಷ್ಟಸಾಧ್ಯ. ದೇಹದಲ್ಲಿನ ಬದಲಾವಣೆಗೆ ಅನಾರೋಗ್ಯವೇ ಕಾರಣ. ಒಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ವ್ಯತ್ಯಾಸಗಳು ಕಾಣುತ್ತಿವೆ. ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಗುಣಮುಖಳಾಗಿದ್ದೇನೆ. ದಯವಿಟ್ಟು ನಿಮ್ಮ ಮನರಂಜನೆಗಾಗಿ ನನ್ನ ಬಗ್ಗೆ ಊಹಾಪೋಹಗಳನ್ನು ಬರೆಯಬೇಡಿ. ನನ್ನ ಬಗ್ಗೆ ವದಂತಿಗಳನ್ನು ಸೃಷ್ಟಿಸಬೇಡಿ. ನನಗೆ ನನ್ನದೇ ಆದ ಜೀವನವಿದೆ. ದಯವಿಟ್ಟು ನನ್ನ ಹೆಸರನ್ನು ಹಾಳು ಮಾಡಬೇಡಿ. ನನ್ನ ಭವಿಷ್ಯಕ್ಕೆ ಕೊಡಲಿ ಹಾಕಬೇಡಿ" ಎಂದು ಮನವಿ ಮಾಡಿದ್ದಾರೆ.
'ಓ ಕಾದಲ್ ಕಣ್ಮಣಿ' ಚಿತ್ರದಲ್ಲಿ ನಟ ದುಲ್ಕರ್ ಸಲ್ಮಾನ್ ಸಹೋದ್ಯೋಗಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಪವಿತ್ರ, ಅದೇ ವರ್ಷ, ಮಿಸ್ ಮದ್ರಾಸ್ ಕಿರೀಟ ಮುಡಿಗೇರಿಸಿಕೊಂಡರು. ಕೇವಲ ಒಂದು ವರ್ಷದಲ್ಲಿ ನಯಿ ಶೇಖರ್ (ತಮಿಳು), ಉಲ್ಲಾಸಂ (ಮಲಯಾಳಂ), ಮತ್ತು ಇನ್ವಿಸಿಭಮ್ (ತಮಿಳು, ಮಲಯಾಳಂ) ಸಿನಿಮಾಗಳಲ್ಲಿ ಕಾಣಿಸಿಕೊಂಡ ಈ ಚೆಲುವೆ, ಜಿಗಿರಿ ದೋಸ್ತು ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮದ್ರಾಸ್ ಚಿತ್ರಗಳಲ್ಲಿಯೂ ಮಿಂಚಿದ್ದಾರೆ,(ಏಜೆನ್ಸೀಸ್).