Shruthi Krishna - 175ನೇ ಚಿತ್ರ "ಮದರ್​' ಮುಹೂರ್ತದಲ್ಲಿ ನಟಿ ಶ್ರುತಿ ಹೇಳಿಕೆ

ಮದರ್​
ಮದರ್​
Published on
Shruthi Krishna -
ಹಲವು ವರ್ಷಗಳ ಕಾಲ ನಾಯಕಿಯಾಗಿ ಮಿಂಚಿ, ಅತ್ತು&ಕರೆದು ತೆರೆಯ ಮೇಲೆ ಗೋಳಾಡಿ, ಪ್ರೇಕ್ಷಕರನ್ನು ಗೋಳಾಡಿಸಿ! ಹಾಸ್ಯ ಪಾತ್ರದಲ್ಲಿ, ಖಳನಾಯಕಿಯಾಗಿ... ಹೀಗೆ ಬಹುತೇಕ ಎಲ್ಲ ರೀತಿಯ ಪಾತ್ರಗಳಲ್ಲಿ ಮಿಂಚಿದ ಹೆಗ್ಗಳಿಕೆ ನಟಿ ಶ್ರುತಿಗೆ ಸಲ್ಲುತ್ತದೆ. ಇಂತಹ ಶ್ರುತಿ ಅವರ 175ನೇ ಚಿತ್ರ "ಮದರ್​' ಮುಹೂರ್ತ ಇತ್ತೀಚೆಗಷ್ಟೆ ನೆರವೇರಿತು. ರಾಕೇಶ್​ ಸೋಮಣ್ಣ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶ್ರುತಿ ಮಂಡ್ಯದ ಕೃಷಿ ಕುಟುಂಬದ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 175ನೇ ಚಿತ್ರಗಳನ್ನು ಪೂರೈಸುತ್ತಿರುವ ಬಗ್ಗೆ, "175ನೇ ಸಿನಿಮಾ ಅನ್ನೋದು ವಿಶೇಷವಲ್ಲ, 35 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿದ್ದೇನೆ. ಈಗಲೂ ಒಳ್ಳೆ ಪಾತ್ರಗಳು ಸಿಗುತ್ತಿರುವುದರಿಂದ ಪ್ರತಿ ಚಿತ್ರಕ್ಕಿಂತ ಇದು ಸ್ವಲ್ಪ ವಿಶೇಷ. ನನ್ನನ್ನು ಚಿತ್ರರಂಗಕ್ಕೆ ಕರೆತಂದ ಡಾ. ರಾಜಕುಮಾರ್​ ಅಪ್ಪಾಜಿಗೆ, "ನಂಬಿದ್ರೆ ನಂಬಿ ಬಿಟ್ರೆ ಬಿಡಿ' ಚಿತ್ರದಲ್ಲಿ ನನ್ನನ್ನು ನಾಯಕಿಯಾಗಿ ಪರಿಚಯಿಸಿದ ಶ್ರೀನಿವಾಸಮೂರ್ತಿ ಅಂಕಲ್​ಗೆ ಹಾಗೂ ನಾನು ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿಯಲು ಕಾರಣವಾದ "ಶ್ರುತಿ' ಸಿನಿಮಾ ನಿರ್ಮಿಸಿದ ದ್ವಾರಕೀಶ್​ ಅಣ್ಣನಿಗೆ ಧನ್ಯವಾದಗಳು. ನಾನು ಚಿತ್ರರಂಗಕ್ಕೆ ಬರಲು ಅಪ್ಪ, ಅಮ್ಮಂದಿರ ಶ್ರಮ&ತ್ಯಾಗದ ಬಗ್ಗೆಯೂ ನನಗೆ ಗೊತ್ತಿದೆ. ಅವರು ಚಿತ್ರದ ಮುಹೂರ್ತಕ್ಕೆ ಬಂದಿದ್ದು ತುಂಬ ಖುಷಿ ಇದೆ. ಈ ಚಿತ್ರದ ಕಥೆ ಕೇಳುವಾಗಲೇ ಇಂಟರೆಸ್ಟಿಂಗ್​ ಅನ್ನಿಸಿತು. ಇನ್ನು ನಾನು ಇದುವರೆಗೆ ಚೆನ್ನಾಗಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ನಿರ್ದೇಶಕರು. ಇದುವರೆಗೆ ಅವಕಾಶ ನೀಡಿದ ಎಲ್ಲ ನಿರ್ದೇಶಕರಿಗೂ ಧನ್ಯವಾದ' ಎನ್ನುತ್ತಾರೆ ಶ್ರುತಿ.

ಮೊದಲ ಬಾರಿ ವರ್ಕ್​ಶಾಪ್​

"ನಾನು ಇದುವರೆಗೂ ಯಾವ ಚಿತ್ರಕ್ಕೂ ವರ್ಕ್​ಶಾಪ್​ ಮಾಡಿ ಅಂತ ನಾನೂ ಕೇಳಿಲ್ಲ. ವರ್ಕ್​ಶಾಪ್​ ಇದೆ ಬನ್ನಿ ಅಂತ ನನಗೂ ಯಾರೂ ಹೇಳಿಲ್ಲ. ಆದರೆ, ಇದೇ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ವರ್ಕ್​ಶಾಪ್​ ಮಾಡೋಣ ಅಂತ ನಾನೇ ನಿರ್ದೇಶಕರಿಗೆ ಹೇಳಿದ್ದೇನೆ. ನನ್ನ ಪಾತ್ರ ಅಂತಲ್ಲ, ಎಲ್ಲ ಪಾತ್ರಗಳ ಡಿಸೈನ್​ ಸೇರಿ ಚಿತ್ರದಲ್ಲಿ ನಾನೂ ತೊಡಿಸಿಕೊಂಡಿದ್ದೇನೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾ ಸೋತಿರುವ ಉದಾಹರಣೆ ತೀರಾ ಕಡಿಮೆ. ಎಲ್ಲರೂ ಶ್ರಮವಹಿಸಿ ಒಳ್ಳೆ ಸಿನಿಮಾ ಮಾಡೋಣ. ಉಳಿದಿದ್ದು ಜನರಿಗೆ ಬಿಡೋಣ' ಎಂದು ನಿರ್ದೇಶಕರಿಗೆ ತಿಳಿಸಿರುವುದಾಗಿ ಹೇಳಿಕೊಳ್ಳುತ್ತಾರೆ ಶ್ರುತಿ.

ಮನೆಗಿಂತ ಸೆಟ್​ನಲ್ಲಿದ್ದಿದ್ದೇ ಹೆಚ್ಚು!

"ನಾನು ಮನೆಗಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಬೆಳೆದವಳು' ಎನ್ನುವ ಶ್ರುತಿ, "ನನ್ನ ಅಣ್ಣ, ತಂಗಿ ಹೇಗೆ ಬೆಳೆದರು ಅನ್ನೋದನ್ನೇ ನೋಡಲಿಲ್ಲ. ಅಷ್ಟರ ಮಟ್ಟಿಗೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೆ. ಒಂದೇ ವರ್ಷ 13 ಸಿನಿಮಾ ರಿಲೀಸ್​ ಆದ ಉದಾಹರಣೆಗಳೂ ಇವೆ. ನಾನು ಮನೆ ಮಗಳಲ್ಲ, ಇಂಡಸ್ಟ್ರಿ ಮಗಳು' ಎಂದು ನಗುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net