ಕರಿಯರ್ನಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶಾನ್ವಿ ಶ್ರೀವಾಸ್ತವಗೆ ಸಲ್ಲುತ್ತದೆ. ಇಂತಹ ಶಾನ್ವಿ 2023ರ "ಬ್ಯಾಂಗ್' ಬಳಿಕ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮೂರು ವರ್ಷಗಳ ಬಳಿಕ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ "ಅಮೆರಿಕ ಅಮೆರಿಕ 2' ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೆ ವಿಜಯವಾಣಿ ಜತೆ ಶಾನ್ವಿ ಮಾತಿಗೆ ಸಿಕ್ಕಿದ್ದರು. ಹಿಟ್ ಚಿತ್ರದ ಸೀಕ್ವೆಲ್ ಬಗ್ಗೆ, ""ಅಮೆರಿಕ ಅಮೆರಿಕ 2'ದಲ್ಲಿ ನನ್ನದು ವಿಭಿನ್ನ, ಸವಾಲಿನ ಪಾತ್ರ. ಇದುವರೆಗೂ ಇಂತಹ ಪಾತ್ರದಲ್ಲಿ ನಟಿಸಿಲ್ಲ. ಸಾಮಾನ್ಯವಾಗಿ ಈ ರೀತಿಯ ಪಾತ್ರಗಳು ಕನ್ನಡದಲ್ಲಿ ಬಂದಿರುವುದು ತೀರಾ ಅಪರೂಪ. ನಾನು ಈ ಪಾತ್ರವನ್ನು ಹೇಗೆ ನಿಭಾಯಿಸಬಲ್ಲೆ? ಇದು ಜನರಿಗೆ ಸರಿಯಾಗಿ ಕನೆಕ್ಟ್ ಆಗುತ್ತಾ? ಆಗಲಿಲ್ಲವೆಂದರೆ, ಈ ಪಾತ್ರದ ಬಗ್ಗೆ ಜನರಲ್ಲಿ ಅಸಮಾಧಾನ ಮೂಡುವ ಆತಂಕವಿತ್ತು. ಏಕೆಂದರೆ ಅಷ್ಟು ಸೆನ್ಸಿಟಿವ್ ಪಾತ್ರವಿದು. ಬಹುತೇಕ ಸಿನಿಮಾಗಳಲ್ಲಿ ನನಗೆ ಶೂಟಿಂಗ್ ಪ್ರಾರಂಭಕ್ಕೂ ಮುನ್ನ ಸ್ಕ್ರಿಪ್ಟ್ ಸಿಗುತ್ತಿರಲಿಲ್ಲ. ಆದರೆ, ಶೂಟಿಂಗ್ ಪ್ರಾರಂಭಕ್ಕೂ ಎರಡು, ಮೂರು ತಿಂಗಳು ಮೊದಲೇ ನಾಗತಿಹಳ್ಳಿ ಸರ್ ನನಗೆ ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಿದ್ದರು. ಹೀಗಾಗಿ ಸಂಭಾಷಣೆ ಕಲಿಯಲು, ಪಾತ್ರದ ಆಳಕ್ಕೆ ಇಳಿಯಲು ಸಾಧ್ಯವಾಯಿತು. ನನಗೂ ಸರಳವಾಯಿತು. ಸೆಟ್ನಲ್ಲಿ ಕೆಲ ಬಾರಿ ಡೈಲಾಗ್ಸ್ ಬದಲಾದರೂ, ಸಮಸ್ಯೆ ಆಗಲಿಲ್ಲ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಪಾತ್ರ ಓವರ್ ಅನ್ನಿಸಿಬಿಡುವ ಆತಂಕವಿತ್ತು. ಹೀಗಾಗಿ ತುಂಬ ಎಚ್ಚರಿಕೆಯಿಂದ ನಿಭಾಯಿಸಬೇಕಿತ್ತು' ಎಂದು ಮಾಹಿತಿ ನೀಡುತ್ತಾರೆ.