

ಮುಂಬೈ: ಬಾಲಿವುಡ್ ಹೀರೋಯಿನ್, ಹೀರೋಗಳು ದಕ್ಷಿಣದ ಕಡೆ ಮುಖ ಮಾಡುತ್ತಿದ್ದರೆ, ದಕ್ಷಿಣದ ಸ್ಟಾರ್ ನಟಿಯರು ಬಾಲಿವುಡ್ ನಲ್ಲಿ ವಿಶಿಷ್ಟ ಐಡೆಂಟಿಟಿ ಪಡೆಯಲು ಮುನ್ನುಗ್ಗುತ್ತಿದ್ದಾರೆ. ಆದರೆ ಸೌತ್ಕ್ವೀನ್ ಖ್ಯಾತಿಯ ಆ ನಟಿ ಎರಡು ವರ್ಷ ಪ್ರಯತ್ನಪಟ್ಟರೂ ಒಂದೇ ಒಂದು ಆಫರ್ ಸಿಗಲಿಲ್ಲ. ಬಾಲಿವುಡ್ ಆ ನಾಯಕಿಯನ್ನು ದೂರವಿಟ್ಟಿದೆಯೇ? ಎಂಬ ಪ್ರಶ್ನೆ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿದೆ.
ಪ್ರಸ್ತುತ ಸ್ಟಾರ್ಗಳು ಭಾಷೆ, ಪ್ರಾಂತ್ಯದ ಎಲ್ಲೆ ಮೀರಿ ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಸೌತ್ ನಾಯಕಿಯರಾದ ರಶ್ಮಿಕಾ ಅನಿಮಲ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಬೇಡಿಕೆ ಕಂಡುಕೊಂಡಿದ್ದಾರೆ. ಆಕೆಯ ಕೈಯಲ್ಲಿ ಎರಡ್ಮೂರು ದೊಡ್ಡ ಬಾಲಿವುಡ್ ಪ್ರಾಜೆಕ್ಟ್‌ಗಳಿವೆ. ಇದರೊಂದಿಗೆ ರಶ್ಮಿಕಾ ಅಲ್ಲೇ ನೆಲೆ ಕಂಡುಕೊಳ್ಳುತ್ತಿದ್ದಾರೆ ಎನ್ನಬಹುದು.
ಇನ್ನು ದಕ್ಷಿಣದ ಮತ್ತೊಬ್ಬ ಸ್ಟಾರ್ ನಟಿ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಕೈಯಲ್ಲಿ ಸಹ ಬಾಲಿವುಡ್ನ ಎರಡು ಚಿತ್ರಗಳಿವೆ. ಕೀರ್ತಿ ಸುರೇಶ್ ಅಭಿನಯದ ಮೊದಲ ಚಿತ್ರ ಮೈದಾನದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಈ ಚೆಲುವೆ ಅಜಯ್ ದೇವಗನ್ ಎದುರು ನಾಯಕಿಯಾಗಿ ನಟಿಸಿದ್ದಾರೆ. ಹೀಗಾಗಿಯೇ ಕೀರ್ತಿಗೆ ಮತ್ತೊಂದು ಬಾಲಿವುಡ್ ಆಫರ್ ಬಂದಿದೆ. ನಿರ್ದೇಶಕ ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಕೀರ್ತಿ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕೀರ್ತಿ ಸುರೇಶ್ ವಿಚಾರ ಹೀಗಾದರೆ ಸಾಯಿ ಪಲ್ಲವಿ ಕೂಡ ಗ್ಲಾಮರ್‌ನ ಎಲ್ಲೆ ಮೀರದೆ ತಮ್ಮ ಶೈಲಿಗೆ ತಕ್ಕಂತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಈ ಚೆಲುವೆ ಯಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ದೊಡ್ಡ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಇದರಲ್ಲಿ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ.
ಮತ್ತೊಂದೆಡೆ, ಸಾಯಿ ಪಲ್ಲವಿ ಅಮೀರ್ ಖಾನ್ ಪುತ್ರನ ಚೊಚ್ಚಲ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನೂ ಟೈಟಲ್ ಫೈನಲ್ ಆಗದ ಈ ಪ್ರಾಜೆಕ್ಟ್ ನಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಮೂವರು ನಾಯಕಿಯರು ಬಾಲಿವುಡ್ ನಲ್ಲಿ ಮುನ್ನುಗ್ಗುತ್ತಿದ್ದರೂ ಸೌತ್ ಕ್ವೀನ್ ಎಂದೇ ಕರೆಸಿಕೊಳ್ಳುವ ಸಮಂತಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಕಳೆದ ಎರಡು ವರ್ಷಗಳಿಂದ, ಸಮಂತಾ ಹಲವಾರು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಲಿಲ್ಲ. ಇದುವರೆಗೂ ಸಮಂತಾ ಒಂದು ವೆಬ್ ಸೀರೀಸ್ ಬಿಟ್ಟರೆ ಬೇರೆ ಯಾವುದೇ ಬಾಲಿವುಡ್ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಲು ಸಾಧ್ಯವಾಗಿಲ್ಲ.
ನಿಜ ಹೇಳಬೇಕೆಂದರೆ, ಈ ಸೌತ್ಕ್ವೀನ್ಗೆ ಮುಂಬೈನಲ್ಲಿ ಬಲವಾದ ಸಂಪರ್ಕವಿದೆ. ಆದರೆ, ಆಕೆಗೆ ಇದುವರೆಗೆ ಒಂದೇ ಒಂದು ಆಫರ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಿ ಟೌನ್ ಆಗಲು ಸಮಂತಾ ಹಿಂದೆ ಬಿದ್ದಿದ್ದಾರಾ? ಎಂಬ ಅನುಮಾನ ಮೂಡಿದೆ.