ದೆಹಲಿ ಮೂಲದ ನಟಿ ರಿತಿಕಾ ನಾಯಕ್ ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ದೆಹಲಿಯಲ್ಲಿ ವ್ಯಾಸಂಗ ಮುಗಿಸಿ, ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು ತೆಲುಗಿನ ‘ಅಶೋಕ ವನಂಲೊ ಅರ್ಜುನ್ ಕಲ್ಯಾಣಂ’ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ನಟಿಯ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆವಾಗುವುದಲ್ಲದೇ, ಚೊಚ್ಚಲ ‘ಸೈಮಾ’ ಪ್ರಶಸ್ತಿಗೆ ಪಾತ್ರರಾಗಿದ್ದರು. ಮೊದಲ ಚಿತ್ರದ ಸಕ್ಸಸ್ ಬಳಿಕ ನಟಿ, ತೇಜಾ ಸಜ್ಜಾ ಅಭಿನಯದ ‘ಮಿರಾಯ್’ನಲ್ಲೂ ನಟಿಸಿ, ಗಮನಸೆಳೆದಿದ್ದರು. ಹಂತ ಹಂತವಾಗಿ ರಿತಿಕಾ ಟಾಲಿವುಡ್‌ನಲ್ಲಿ ಛಾಪು ಮೂಡಿಸಿ, ತೆಲುಗಿನಲ್ಲಿ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ‘ಮಿರಾಯ್’ ಸಕ್ಸಸ್ ಬಳಿಕ ರಿತಿಕಾ ‘ಡ್ಯುಯೆಟ್’, ‘ಕೊರಿಯನ್ ಕನಕರಾಜು’ ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ ಅವರು ಮತ್ತೊಂದು ಹೊಸ ತೆಲುಗು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ತಮ್ಮುಡು’, ‘ರಾಬಿನ್‌ಹುಡ್’ ಬಳಿಕ ನಟ ನಿತಿನ್ ಹೊಸ ಸಿನಿಮಾ ಘೋಷಿಸಿದ್ದು, ಇತ್ತೀಚೆಗೆ ಮುಹೂರ್ತ ನೆರವೇರಿದೆ. ಇಲ್ಲಿ ಅವರಿಗೆ ರಿತಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 2016ರ ‘ಅ ಆ’ ಮತ್ತು 2020ರ ‘ಭೀಷ್ಮ’ ಎರಡು ಚಿತ್ರಗಳನ್ನು ಹೊರತುಪಡಿಸಿ ಕಳೆದ ಒಂದು ದಶಕದಲ್ಲಿ ನಿತಿನ್ ಅಭಿನಯದ ಬಹುತೇಕ ಎಲ್ಲ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿವೆ. ಹೀಗಾಗಿಯೇ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಚಿತ್ರಗಳಲ್ಲಿ ನಟಿಸಿರುವ ರಿತಿಕಾ, ನಿತಿನ್ ಪಾಲಿಗೆ ಗುಡ್‌ಲಕ್ ಆಗುತ್ತಾರಾ? ಎಂಬುದು ಸದ್ಯ ಅಭಿಮಾನಿಗಳ ಕುತೂಹಲ. ಅಂದಹಾಗೆ, ಇದೊಂದು ರೊಮ್ಯಾಂಟಿಕ್-ಕಾಮಿಡಿ ಜಾನರ್ ಚಿತ್ರವಾಗಿರಲಿದ್ದು, ಹೊಸಬರಾದ ನರಿ ಸಿರಿಸವಾಡ ಮತ್ತು ಸೋಮಶೇಖರ್ ಟಿ. ಜಂಟಿಯಾಗಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆದರೆ, ನಟಿಯ ಪಾತ್ರ ಹಾಗೂ ಲುಕ್ ಬಗ್ಗೆ ಇನ್ನು ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. -ಏಜೆನ್ಸೀಸ್