

ಬೆಂಗಳೂರು: ರಾಜ್ಯದ ಧೀಮಂತ ನಾಯಕ, ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (SM Krishna) (92) ಅವರು ವಯೋಸಹಜ ಕಾಯಿಲೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಹಿರಿಯ ರಾಜಕಾರಣಿಯ ನಿಧನ ಸುದ್ದಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಎಸ್.ಎಂ ಕೃಷ್ಣ ಅವರ ಅಗಲಿಕೆಯ ಹಿನ್ನೆಲೆ ರಾಜ್ಯ ಸರ್ಕಾರ ಡಿ.11ರಂದು ಸರ್ಕಾರಿ ರಜೆ ಘೋಷಣೆ ಮಾಡಿದೆ.
ಎಸ್.ಎಂ. ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಅಗತ್ಯ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿಯೇ ಇಂದು ಮಧ್ಯರಾತ್ರಿ 2.30ರ ಹೊತ್ತಿಗೆ ವಿಧಿವಶರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಚಿತ್ರನಟಿ ರಮ್ಯಾ ಅವರಿಗೆ ಅತ್ಯಾಪ್ತರಾಗಿದ್ದ ಎಸ್.ಎಂ. ಕೃಷ್ಣ ಅವರು, ರಮ್ಯಾಗೆ ಗುರುವಿನ ರೀತಿ ಮಾರ್ಗದರ್ಶನ ನೀಡಿದ್ದರು. ತಂದೆ ಸ್ಥಾನದಲ್ಲಿದ್ದ ನೆಚ್ಚಿನ ಗುರುಗಳ ನಿಧನ ಸುದ್ದಿ ತಿಳಿದು ಆಘಾತಕ್ಕೊಳಗಾಗಿರುವ ನಟಿ, ಅವರ ನಿವಾಸಕ್ಕೆ ಭೇಟಿ ಕೊಟ್ಟು, ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಭಾವುಕರಾಗಿ ಒಂದೆರೆಡು ಮಾತನಾಡಿದ ರಮ್ಯಾ, "ಈಗ ನನ್ನಿಂದ ಏನು ಮಾತನಾಡಲು ಸಾಧ್ಯವಾಗುತ್ತಿಲ್ಲ. ಮಾನಸಿಕವಾಗಿ ನನಗೆ ನೋವುಂಟಾಗಿದೆ" ಎಂದು ಹೇಳಿ, ಅಲ್ಲಿಂದ ತೆರಳಿದ್ದಾರೆ. ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಹಿರಿಯ ರಾಜಕಾರಣಿ ಅಂತಿಮ ದರ್ಶನಕ್ಕೆ ಆಗಮಿಸಿದ್ದು, ಭಾವುಕ ನಮನ ಸಲ್ಲಿಸಿದ್ದಾರೆ.
'ಮೋಹಕತಾರೆ'ಯಾಗಿ ಚಿತ್ರರಂಗದಲ್ಲಿ ಮಿಂಚಿದ ನಟಿ ರಮ್ಯಾರನ್ನು ರಾಜಕೀಯ ಅಖಾಡಕ್ಕೆ ಬರುವಂತೆ ಸಲಹೆ ನೀಡಿದ್ದೇ ಎಸ್.ಎಂ. ಕೃಷ್ಣ ಅವರು. ಅಂದು ಅವರ ಮಾತಿನಿಂದ ಪ್ರೇರಣೆಗೊಂಡ ರಮ್ಯಾ, ಚುನಾವಣೆಯಲ್ಲಿ ಸ್ಪರ್ಧಿಸಿ, ಸಂಸದೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅತೀ ಕಡಿಮೆ ಸಮಯದಲ್ಲಿ ಕಾಂಗ್ರೆಸ್ ನಾಯಕಿಯಾಗಿ ಜನಪ್ರಿಯತೆ ಗಳಿಸಿದ ರಮ್ಯ, ಚಿತ್ರರಂಗದಿಂದ ದೂರ ಉಳಿದುಬಿಟ್ಟರು. 'ಕೈ' ಅಧಿನಾಯಕಿ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಅವರೊಟ್ಟಿಗೆ ಕೆಲಸ ಮಾಡಿದ ಮೋಹಕತಾರೆ, ಎಸ್.ಎಂ. ಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಕ್ಷದ ಪರ ಹಲವು ಜವಾಬ್ದಾರಿಯುತ ಕೆಲಸಗಳನ್ನು ನಿಭಾಯಿಸಿದ್ದಾರೆ. ಸದ್ಯ ಸಿನಿಮಾ ಮತ್ತು ರಾಜಕಾರಣ ಎರಡರಿಂದಲೂ ಅಂತರ ಕಾಯ್ದುಕೊಂಡಿರುವ ನಟಿ, ಸಾರ್ವಜನಿಕವಾಗಿಯೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ಬೆಂಗಳೂರಿನ ಸದಾಶಿನಗರದ ನಿವಾಸದಲ್ಲಿ ಬುಧವಾರ ಬೆಳಗ್ಗೆ 8 ಗಂಟೆವರೆಗೆ ಎಸ್. ಎಂ. ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಂಡ್ಯ ಜಿಲ್ಲೆಯ ಸ್ವಗ್ರಾಮ ಸೋಮನಹಳ್ಳಿಗೆ ಪಾರ್ಥೀವ ಶರೀರದ ರವಾನೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬುಧವಾರ ಮದ್ಯಾಹ್ನ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ಹೇಳಿದರು.