ಸರೋಜ್ ಖಾನ್​ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ

collage (1)
Published on

ಬಾಲಿವುಡ್​ನ ಹಿರಿಯ ಮತ್ತು ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್​ ಖಾನ್​, ಶುಕ್ರವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಸಾವಿಗೆ ಭಾಷೆ ಮತ್ತು ಗಡಿಯ ಹಂಗಿಲ್ಲದೆ ಎಲ್ಲಾ ಸೆಲೆಬ್ರಿಟಿಗಳು ಸಹ ಕಂಬನಿ ಮಿಡಿದಿದ್ದಾರೆ. ನೆಚ್ಚಿನ ಕೋರಿಯಾಗ್ರಫರ್​ನನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಸಿನಿಮಾ ಮಂದಿ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅದೇ ರೀತಿ ಸ್ಯಾಂಡಲ್ವುಡ್​ ನಟಿ ಪ್ರಿಯಾಂಕಾ ಉಪೇಂದ್ರ ಸಹ ಸರೋಜಾ ಖಾನ್​ ಅವರನ್ನು ಸ್ಮರಿಸಿದ್ದಾರೆ.

ಟ್ವಿಟರ್​ನಲ್ಲಿ ಫೋಟೋ ಪೋಸ್ಟ್ ಮಾಡಿ, ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಜತೆ ಕೆಲಸ ಮಾಡಿದ್ದೇ ನಮ್ಮ ಭಾಗ್ಯ. ಅರ್ಷದ್ ವಾರ್ಸಿ ಮತ್ತು ರೇಖಾ ಅವರೊಂದಿಗೆ ‘ಮುಝೇ ಮೇರಿ ಬೀವಿಸೇ ಬಚಾವೋ’ ಸಿನಿಮಾ ಮಾಡಿದ್ದೇ. ಆ ಚಿತ್ರದ ಹಾಡಿಗೆ ನೀವೇ ನೃತ್ಯ ಸಂಯೋಜನೆ ಮಾಡಿದ್ದೀರಿ. ನಿಮ್ಮನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದ ಸರೋಜ್​ ಅವರು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಬಿಡುಗಡೆಯಾದ ಮುರಳೀಕೃಷ್ಣ ನಿರ್ದೇಶನದ ‘ಗರ’ ಚಿತ್ರದ ಹಾಡಿಗೆ ಮುಂಬೈನಿಂದ ಬಂದು ಸರೋಜ್​ ಅವರು ನೃತ್ಯ ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಅದೇ ಅವರು ನೃತ್ಯ ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರ ಎಂದು ಹೇಳಲಾಗಿತ್ತು. ಆದರೆ, 30 ವರ್ಷಗಳ ಮುನ್ನವೇ ಸರೋಜ್​ ಖಾನ್​ ಅವರು ಕನ್ನಡದ ಚಿತ್ರವೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹೌದು, 34 ವರ್ಷಗಳ ಹಿಂದೆ ಬಿಡುಗಡೆಯಾದ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಸರೋಜ್​ ಖಾನ್​ ನೃತ್ಯ ಸಂಯೋಜನೆ ಮಾಡಿದ್ದರು. ಅವರನ್ನು ಕನ್ನಡ ಚಿತ್ರರಂಗಕ್ಕೆ ಮೊದಲು ಪರಿಚಯಿಸಿದ್ದು ಹಿರಿಯ ನಟ-ನಿರ್ದೇಶಕ ದ್ವಾರಕೀಶ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net