Priyanka Thimmesh - ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ ಎಂದ ನಟಿ

ಪ್ರಿಯಾಂಕಾ ತಿಮ್ಮೇಶ್​
ಪ್ರಿಯಾಂಕಾ ತಿಮ್ಮೇಶ್​
Published on
Priyanka Thimmesh -
ಕನ್ನಡದ "ಗಣಪ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ನಟಿ ಪ್ರಿಯಾಂಕಾ ತಿಮ್ಮೇಶ್​. ನಂತರ ಕನ್ನಡದ ಜತೆಗೆ ತಮಿಳು, ಮಲಯಾಳಂನಲ್ಲೂ ಮಿಂಚಿ, ಬಿಗ್​ಬಾಸ್​ ಕನ್ನಡ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಆದರೆ, 2022ರ "ಶುಗರ್​ಲೆಸ್​' ಬಳಿಕ ಅವರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಅವರು ಬ್ರೇಕ್​ ತೆಗೆದುಕೊಂಡಿದ್ದಾರೆ ಅಂತಲ್ಲ. ಬದಲಾಗಿ "ರುದ್ರಾಭಿಷೇಕಂ', "ಕೌಂತೇಯ', "ಕುಟೀರ' ಹೀಗೆ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ವರ್ಷ ಎರಡು ಸಿನಿಮಾ ತೆರೆಗೆ ಬರಲಿವೆ. "ಕನ್ನಡದಲ್ಲಿ ಸದ್ಯ ಮೂರು ಚಿತ್ರಗಳಿವೆ. "ರುದ್ರಾಭಿಷೇಕಂ'ನಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಂದೇ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಗುವುದೇ ಅಪರೂಪ. ನನಗೆ ಈ ಆರ್​ ಸಿಕಕ ಖುಷಿಯಿದೆ. ಒಂದರಲ್ಲಿ ಸಿಟಿ ಹುಡುಗಿ ಇನ್ನೊಂದು ಶೇಡ್​ನಲ್ಲಿ ಹಳ್ಳಿ ಹುಡುಗಿಯಾಗಿದ್ದೇನೆ. ಕೆಲವೊಮ್ಮೆ ಶೂಟಿಂಗ್​ ಸಮಯದಲ್ಲಿ ಒಂದೇ ದಿನ ಎರಡೂ ಲುಕ್​ಗಳಲ್ಲಿ ನಟಿಸಬೇಕಿತ್ತು. ಆಗ ಮಾನಸಿಕವಾಗಿ ಬದಲಾಗಬೇಕಿತ್ತು. ಹಾಗೇ ಕೆಲವೊಮ್ಮೆ ಬೆಳಗ್ಗಿನ ಸಮಯದಲ್ಲಿ ಒಂದು ರೀತಿ ಇರುತ್ತಿದ್ದೆ, ರಾತ್ರಿ ಸಮಯದಲ್ಲಿ ಹಾರರ್​ ಅಂಶಗಳ ಶೂಟಿಂಗ್​ ನಡೆಸುತ್ತಿದ್ದ ಕಾರಣ, ಅಲ್ಲೂ ಮಾನಸಿಕ ಸಿದ್ಧತೆ ಬೇಕಾಗುತ್ತಿತ್ತು. ಸವಾಲಿನ, ಸಮಾಧಾನ ನೀಡಿದ ಪಾತ್ರದಲ್ಲಿ ನಟಿಸಿದ ಖುಷಿಯಿದೆ. ಹಾಗೇ "ಕೌಂತೇಯ'ದಲ್ಲಿ ಪೊಲೀಸ್​ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ಇನ್ನೊಂದು ಸಿನಿಮಾ ಕೂಡ ಇದೆ' ಎಂದು ಮಾಹಿತಿ ನೀಡುತ್ತಾರೆ.

ಈಟ್​ ಸಿನಿಮಾ, ಡ್ರಿಂಕ್​ ಸಿನಿಮಾ, ಸ್ಲೀಪ್​ ಸಿನಿಮಾ!

ಕಳೆದ 12 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಪ್ರಿಯಾಂಕಾ ನಟಿಸಿರುವುದು ಮೂರು ತಮಿಳು, ಒಂದು ಮಲಯಾಳಂ ಸೇರಿ 10 ಚಿತ್ರಗಳಷ್ಟೇ. "ಆದರೆ, ಇದುವರೆಗೂ ನನ್ನಲ್ಲಿ ಎನರ್ಜಿ ಕಡಿಮೆ ಆಗಿಲ್ಲ. ಸಿನಿಮಾನ ಮರೆತಿಲ್ಲ. ಪ್ರತಿದಿನ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ಒಳ್ಳೆ ಅವಕಾಶಗಳಿಗೆ ಎದುರು ನೋಡುತ್ತಿದ್ದೇನೆ. ಒಂದು ದೊಡ್ಡ ಗುರಿ ಇದೆ. ಒಂದಲ್ಲ ಒಂದು ದಿನ ಅದನ್ನು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ. ಹೊಸ ಕಲಾವಿದರು ಬರುತ್ತಿದ್ದಾರೆ. ಎಲ್ಲರಿಗೂ ಅವಕಾಶಗಳು ಬೇಕು. ನನ್ನ ಬಳಿ ಸಿನಿಮಾ ಇಲ್ಲ ಅಂತಲ್ಲ. ರಿಲೀಸ್​ ತಡವಾಗುತ್ತಿದೆಯಷ್ಟೆ. ಹಾಗಂತ ಬೇಸರವಂತೂ ಇಲ್ಲ. ಯಾವುದೇ ಹಿನ್ನೆಲೆಯಿಲ್ಲದೇ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಕಾರಣ, ಇದುವರೆಗೂ ತುಂಬ ಕಲಿತಿದ್ದೇನೆ. ಕೊನೆಯ ಉಸಿರಿರುವವರೆಗೂ ನಟಿಸುತ್ತೇನೆ. ಇದುವರೆಗೂ ಬಂದ ಅವಕಾಶಗಳೆಲ್ಲವೂ ನನ್ನ ಕೆಲಸ ನೋಡಿ ಬಂದಿದ್ದು. ಸಿನಿಮಾ ಸಾಕು ಅಂತ ಅನ್ನಿಸಿಲ್ಲ, ಅನ್ನಿಸುವುದೂ ಇಲ್ಲ' ಎಂದು ಹೇಳಿಕೊಳ್ಳುತ್ತಾರೆ.

ಗುರಿ ತಲುಪುವವರೆಗೂ ಹೋರಾಟ ನಿರಂತರ

"ಸುಮ್ಮನೇ ಸಿಕ್ಕ ಸಿನಿಮಾ ಮಾಡಿಕೊಂಡು ಹೋಗಲು ಬಂದಿಲ್ಲ' ಎನ್ನುವ ಪ್ರಿಯಾಂಕಾ, "12 ವರ್ಷ ಆಯಿತು, ಇಷ್ಟರಲ್ಲಿ 50 ಸಿನಿಮಾ ಮಾಡಿಬಿಡಬೇಕು ಅಂತಲ್ಲ. 10 ಸಿನಿಮಾ ಮಾಡಿದ್ದರೂ ಅವುಗಳ ಬಗ್ಗೆ ಜನರಿಗೆ ಗೊತ್ತಿರಬೇಕು. ಕಂಟೆಂಟ್​ ಮತ್ತು ಪಾತ್ರದ ಮೂಲಕ ಜನ ಗುರುತಿಸಬೇಕು. "ಗಣಪ' ಮಾಡುವಾಗ ನನಗೆ ಸಿನಿಮಾ ಗಂಧ-ಗಾಳಿ ಗೊತ್ತಿರಲಿಲ್ಲ. ಆದರೆ, ಆ ಚಿತ್ರದಿಂದ ಜನ ನನ್ನನ್ನು ಈಗಲೂ ಗುರುತಿಸುತ್ತಾರೆ. ಒಂದು ಸಿನಿಮಾ ಮಾಡಿದರೂ, ಒಳ್ಳೆ ಸಿನಿಮಾ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಹಾಗೇ ನನಗೆ ಮನಃಶಾಂತಿ ಮುಖ್ಯ. ಸಿಕ್ಕಿದ್ದರಲ್ಲಿ ಸಮಾಧಾನಪಡುವವಳು. ಯಾರನ್ನೋ ಮೆಚ್ಚಿಸಲು ಸಿನಿಮಾ ಮಾಡಲು ಇಷ್ಟವಿಲ್ಲ. ಯಶಸ್ಸು ಸಿಕ್ಕರೆ ಖುಷಿ. ಇಲ್ಲದಿದ್ದರೆ ಹೊಸ ಪ್ರಯತ್ನ. ಸೋಲು, ಗೆಲುವು ಇದ್ದೇ ಇರುತ್ತದೆ. 12 ವರ್ಷವಾದರೂ ಇಲ್ಲೇ ಇದ್ದೇನೆ ಅಂದರೆ ಅದೂ ಒಂದು ಸಕ್ಸಸ್​. ಆದರೆ, ನಾನು ಅಂದುಕೊಂಡಿರುವ ಗುರಿ ತಲುಪುವವರೆಗೂ ಹೋರಾಟ ಮುಂದುವರಿಸುತ್ತೇನೆ' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net