

ಬೆಂಗಳೂರು: ‘ಓಂ’ ಸಿನಿಮಾ ಇಂದಿಗೆ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳನ್ನು ಪೂರೈಸಿತು. ಇಡೀ ಚಿತ್ರರಂಗ ಆ ಮಾಸ್ಟರ್ಪೀಸ್ ಚಿತ್ರವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆ ಫೋಟೋಗಳನ್ನು ಪೋಸ್ಟ್ ಮಾಡುತ್ತ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ಇಂಥ ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ಪ್ರೇಮಾ.
‘ಇಂದಿಗೂ ನೆನಪಿನಲ್ಲಿ ಉಳಿಯುವಂಥ ಸನ್ನಿವೇಶವದು. ಅದ್ಯಾವ ಮಟ್ಟಿಗೆ ಅಂದರೆ, ಸಿನಿಮಾ ಕ್ಷೇತ್ರವೇ ಸಾಕೆನಿಸುವಂತೆ ಮಾಡಿದ ದೃಶ್ಯವದು. ಕಾರ್ನಲ್ಲಿ ಬೆಂಕಿ ಹಾಕ್ತಾರೆ. ಬೆಂಕಿಗೆ ಕಾರು ಧಗ ಧಗ ಹೊತ್ತಿ ಉರಿಯುತ್ತದೆ. ಆವತ್ತೂ ಆ ಕಾರಿನಲ್ಲಿಯೇ ನಾನಿದ್ದೆ. ಅದರೊಳಗಿಂದ ನನ್ನನನು ದರದರನೇ ಹೊರಗೆಳೆದು ತರಬೇಕು. ಕ್ಯಾಮರಾ ಮನ್ ಗೌರೀಶ್, ನನ್ನನ್ನು ಕಾರಿನಲ್ಲಿ ಕೂರಿಸುವುದು ಬೇಡ, ಕ್ಯಾಮರಾದಲ್ಲಿ ಅವರು ಸೆರೆಯಾಗುವುದೇ ಇಲ್ಲ ಎನ್ನುತ್ತಿದ್ದರು. ಆದರೆ, ನಿರ್ದೇಶಕ ಉಪೇಂದ್ರ ಮಾತ್ರ ನೈಜವಾಗಿಯೇ ಇರಲಿ. ಅವರನ್ನು ಅಲ್ಲೇ ಕೂರಿಸಿ ಎಂದಿದ್ದರು’ ಎನ್ನುವ ಪ್ರೇಮಾ ಮುಂದಿನ ದೃಶ್ಯದ ಬಗ್ಗೆಯೂ ಹೇಳುತ್ತಾರೆ.
‘ಈ ಕಥೆ ಅಷ್ಟಕ್ಕೆ ಮುಗಿಯಲಿಲ್ಲ. ಕಾರಿನಲ್ಲಿ ಒಡೆದ ಗಾಜುಗಳು ಬೆನ್ನಿಗೆ ತಾಕಿ ರಕ್ತ ಬರುತ್ತಿತ್ತು. ಕೈಗಳೆಲ್ಲ ರಕ್ತದಲ್ಲೇ ಒದ್ದೆಯಾಗಿತ್ತು. ಆ ಇನ್ಸಿಡೆಂಟ್ ಇಂದಿಗೂ ನೆನೆದರೆ ಭಯ ಆಗುತ್ತದೆ. ಬೆನ್ನಿಗೆ ಚುಚ್ಚಿದ್ದ ಗಾಜುಗಳನ್ನು ಶೂಟಿಂಗ್ ಮುಗಿದ ಮೇಲೆ ಬಾಳೆಹಣ್ಣು ಬಳಸಿ ತೆಗೆಯಲಾಯಿತು. ಬೇಸರದಲ್ಲೇ ಇದು ಒಂದು ಸಿನಿಮಾನಾ... ಇಂಥ ರಕ್ತ ಸಿಕ್ತ ದೃಶ್ಯಗಳೇಕೆ ಬೇಕಿತ್ತು.. ಇದೆಲ್ಲವನ್ನು ನೋಡಿ ಸಿನಿಮಾ ಸಹವಾಸನೇ ಸಾಕು ಎಂದೆನಿಸಿತ್ತು. ಆಗಿನ್ಚಿನು ನನಗೆ 18 ವರ್ಷ. ಚಿತ್ರರಂಗವನ್ನೇ ಬಿಡುವ ನಿರ್ಧಾರಕ್ಕೆ ಬಂದಿದ್ದೆ. ಅದಾದ ಬಳಿಕ ಉಪ್ಪಿ ಅವರ ‘ಉಪೇಂದ್ರ’ ಸಿನಿಮಾದ್ದೂ ಅದೇ ಕಥೆ. ಅವರ ಸಿನಿಮಾ ಒಪ್ಪಿಕೊಳ್ಳುವುದೇ ಒಂದು ರೀತಿ ಭಯ. ನನಗಷ್ಟೇ ಅಲ್ಲ, ಬಾಲಿವುಡ್ ನಟಿ ರವೀನಾ ಟಂಡನ್ಗೂ ಇವರೂ ಒಬ್ಬ ನಿರ್ದೇಶಕರಾ ಅಂತ ಅನಿಸಿತ್ತು..’ ಎಂದು ಆ ದಿನಗಳನ್ನು ನೆನೆಯುತ್ತಾರೆ ಪ್ರೇಮಾ.