ಜುಲೈನಲ್ಲಿ ಧನುಷ್​ ಜತೆ ಮದುವೆ! ನಟಿ ಮೀನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

Dhanusha and Meena
ನಟಿ ಮೀನಾ ಮತ್ತು ನಟ ಧನುಷ್​
Published on

ಚೆನ್ನೈ: ನಟಿ ಮೀನಾ ಮತ್ತು ನಟ ಧನುಷ್ ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಸುದ್ದಿ ಅಚ್ಚರಿಯ ಜತೆಗೆ ಕೆಲವರಿಗೆ ಆಘಾತವನ್ನು ಉಂಟುಮಾಡಿದೆ. ಇದೀಗ ಸ್ವತಃ ನಟಿ ಮೀನಾ ಅವರೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ನಟಿ ಮೀನಾ ಸ್ಪಷ್ಟನೆಗೂ ಮುನ್ನ ಈ ಸುದ್ದಿ ಹೇಗೆ ಹರಡಿತು ಎಂಬುದನ್ನು ಮೊದಲು ನೋಡೋಣ. ತಮಿಳು ಚಿತ್ರರಂಗದ ವಿವಾದಿತ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್​ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಅದರಲ್ಲೂ ನಟಿಯರೇ ಹೆಚ್ಚು. ಇದೇ ರಂಗನಾಥನ್​ ಧನುಷ್​ ಮತ್ತು ಮೀನಾ ಅವರ ಮದುವೆ ವಿಚಾರವನ್ನು ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ತೇಲಿಬಿಟ್ಟ ಬಳಿಕ ಬಹಳ ಚರ್ಚೆಗೆ ಗ್ರಾಸವಾಗಿದೆ.

ರಂಗನಾಥನ್​ ಹೇಳಿದ್ದೇನು?

ನಟ ಧನುಷ್​, ದಕ್ಷಿಣ ಭಾರತದ ನಟಿ ಮೀನಾ ಅವರನ್ನು ಮದುವೆ ಆಗಲು ಪ್ಲಾನ್​ ಮಾಡಿದ್ದಾರಂತೆ. ಕೆಲವೇ ತಿಂಗಳ ಹಿಂದೆ ಮೀನಾ ಅವರ ಪತಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಧನುಷ್ ಕಡಿದುಕೊಂಡಿರುವುದರಿಂದ ಜುಲೈನಲ್ಲಿ ಮೀನಾರನ್ನು ಧನುಷ್​ ಮದುವೆ ಆಗಲಿದ್ದಾರೆ. ಇಬ್ಬರು ಕೂಡ ಯುವ ವಯಸ್ಸಿನವರಾಗಿದ್ದು ತಮ್ಮ ಜೀವನ ಸಂಗಾತಿಗಳಿಲ್ಲದೆ ಬದುಕುತ್ತಿದ್ದಾರೆ. ಹಾಗಾಗಿ ಇಬ್ಬರೂ ಒಂದಾಗಿ ಬೇರೆ ಜೀವನ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವೊಮ್ಮೆ ಮದುವೆಯಾಗದೆ ಇಬ್ಬರೂ ಒಟ್ಟಿಗೆ ವಾಸಿಸುವ ಸಾಧ್ಯತೆಯಿದೆ ಎಂದು ಬೈಲ್ವಾನ್ ರಂಗನಾಥನ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದರು.

ವದಂತಿಗೆ ತೆರೆ ಎಳೆದ ಮೀನಾ

ಧನುಷ್​ ಜತೆಗಿನ ಮದುವೆ ವದಂತಿಗೆ ಇದೀಗ ನಟಿ ಮೀನಾ ಅವರು ತೆರೆ ಎಳೆದಿದ್ದಾರೆ. ನೀವು ಕೇಳುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇಂದಿಗೂ ನನ್ನ ಪತಿ ಇಲ್ಲ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇಂಥಹ ಕತೆಗಳನ್ನು ಅದು ಹೇಗೆ ಹುಟ್ಟುಹಾಕುತ್ತಾರೆ. ಸದ್ಯ ಒಳ್ಳೆಯ ಸಿನಿಮಾ ಮತ್ತು ಪಾತ್ರಗಳಲ್ಲಿ ನಟಿಸಬೇಕು ಎಂಬುದು ಮತ್ತು ನನ್ನ ಮಗಳನ್ನು ನೋಡಿಕೊಳ್ಳಬೇಕು ಎಂಬುದೇ ನನ್ನ ಬಯಕೆಯಾಗಿದೆ ಎಂದು ಹೇಳುವ ಮೂಲಕ ನಟಿ ಮೀನಾ ವದಂತಿಗೆ ತೆರೆ ಎಳೆದಿದ್ದಾರೆ.

ಧನುಷ್​ ಡಿವೋರ್ಸ್​ ಹಿನ್ನೆಲೆ

ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ನಿರ್ಧಾರ ತಿಳಿಸಿದ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದರು. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.

ಅಂದಹಾಗೆ ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ.

ಅನಾರೋಗ್ಯದಿಂದ ಮೀನಾ ಪತಿ ಮರಣ

ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net