ಪೆಪೆಯಲ್ಲಿ ಕಾಜಲ್ !: ಬೋಲ್ಡ್ ಪಾತ್ರದಲ್ಲಿ ಮಿಂಚಲಿದ್ದಾರೆ ಕರಾವಳಿ ಮೂಲದ ನಟಿ

kajal 2
Published on

ಬೆಂಗಳೂರು: ಹಿಂದಿ ಕಿರುತೆರೆ ಸೇರಿ ಕನ್ನಡ, ತುಳು ಸಿನಿಮಾದಲ್ಲಿ ಮಿಂಚಿದವರು ನಟಿ ಕಾಜಲ್ ಕುಂದರ್. ಕರಾವಳಿ ಮೂಲದ ನಟಿಯು ಕನ್ನಡದ ‘ಮಾಯಾ ಕನ್ನಡಿ’, ‘ಬಾಂಡ್ ರವಿ’, ‘ಕೆಟಿಎಂ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಶ್ರೀಲೇಶ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರದಲ್ಲಿ ವಿನಯ್ ರಾಜಕುಮಾರ್‌ಗೆ ಜೋಡಿಯಾಗಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಜಲ್ ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ ಈ ಸಿನಿಮಾದಲ್ಲಿ ಸಿಂಧೂ ಎಂಬ ಶಿಕ್ಷಕಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಇದು ತುಂಬಾ ಬೋಲ್ಡ್ ಆದ ಪಾತ್ರವಾಗಿದೆ. ಸಮಾಜ ಅಥವಾ ಕುಟುಂಬದಲ್ಲಿ ನಡೆಯುವ ತಪ್ಪುಗಳನ್ನು ಯಾರಿಗೂ ಹೆದರದೆ ನೇರವಾಗಿ ಖಂಡಿಸುವ ಮನೋಭಾವವುಳ್ಳ ಪಾತ್ರವಾಗಿದೆ. ಮಾಸ್ ಸಬ್ಜೆಕ್ಟ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸಮಾಜಕ್ಕೆ ಹೊಸ ವಿಷಯ ತಿಳಿಸುವುದಲ್ಲದೇ ಸಂದೇಶ ನೀಡುತ್ತದೆ’ ಎನ್ನುತ್ತಾರೆ.

ಪಾತ್ರಕ್ಕಾಗಿ ರಿಹರ್ಸಲ್: ಆಡಿಷನ್ ಮೂಲಕ ‘ಪೆಪೆ’ಗೆ ನಾಯಕಿಯಾಗಿ ಆಯ್ಕೆಯಾದ ಕಾಜಲ್ ಕುಂದರ್ ಆರಂಭದಿಂದಲೂ ಪಾತ್ರಕ್ಕಾಗಿ ಹಲವು ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರಂತೆ. ಗ್ರಾಮೀಣ ಸೊಗಡಿನ ವಿಷಯ ಇದಾಗಿರುವುದರಿಂದ ಅದಕ್ಕೆ ತಕ್ಕಂತೆ ಪಾತ್ರ ನಿರ್ವಹಣೆ ಮಾಡಿದ್ದಾರೆ. ಈ ಬಗ್ಗೆ ಅವರೇ ಹೇಳುವಂತೆ, ‘ನನ್ನ ಪಾತ್ರವು ಕುಟುಂಬ ಆಧಾರಿತವಾಗಿದ್ದು, ಅಲ್ಲಿ ಸಾಕಷ್ಟು ಸಂಭಾಷಣೆ ಬರುತ್ತವೆ. ಅಲ್ಲದೇ ನಾನಾ ಬಗೆಯ ಭಾವನೆಗಳನ್ನು ನನ್ನ ಪಾತ್ರದ ಮೂಲಕ ತೋರಿಸಬೇಕಿತ್ತು. ಇದಕ್ಕೆ ಅಗತ್ಯವಾದ ತರಬೇತಿ ಬೇಕಿತ್ತು. ಆ ಕಾರಣಕ್ಕಾಗಿ ಶೂಟಿಂಗ್ ಫ್ರೀ ಟೈಮ್‌ನಲ್ಲಿ ಸಾಕಷ್ಟು ರಿಹರ್ಸಲ್ ಮಾಡಿದ್ದೇನೆ. ಹಿರಿಯ ಕಲಾವಿದರಿಂದ ಸಂಧ್ಯಾ ಅರಿಕೆರೆ, ಶಶಿಧರ್ ಭಟ್ ಸಾಕಷ್ಟು ತರಬೇತಿ ನೀಡಿದ್ದಾರೆ. ಸಂಭಾಷಣೆ, ಭಾವನೆಗಳು ಬರಲು ಸಾಕಷ್ಟು ಬಾರಿ ರಿಹರ್ಸಲ್ ಮಾಡಿದ್ದೇನೆ. ಆದರೆ, ಗ್ರಾಮೀಣದ ಸೊಗಡಿನ ಚಿತ್ರ ಇದಾಗಿರುವುದರಿಂದ ಅದಕ್ಕೆ ತಕ್ಕಂತೆ ಸಂಭಾಷಣೆ ಬರಬೇಕಿತ್ತು. ಆ ಕಾರಣಕ್ಕಾಗಿ ಡಬ್ಬಿಂಗ್ ಮಾಡಿಲ್ಲ ಎನ್ನುವ ಕಾಜಲ್, ಈ ಸಿನಿಮಾದ ಪಾತ್ರದ ಮೂಲಕ ಮೊದಲ ಬಾರಿಗೆ ರಕ್ತವನ್ನು ನೋಡಿದ್ದಾರಂತೆ. ಬಹುತೇಕ ಶೂಟಿಂಗ್ ಕೂರ್ಗ್‌ನಲ್ಲಿ ನಡೆಸಲಾಗಿದ್ದು, ಚಳಿಗಾಲ ಅವಧಿಯಲ್ಲಿನ ಮಳೆಯ ದೃಶ್ಯಗಳು ತುಂಬಾ ಸವಾಲಾಗಿದ್ದವು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಇನ್ನೊಂದು ಸಿನಿಮಾದ ಚಿತ್ರೀಕರಣ ಪೂರ್ಣ: ‘ಪೆಪೆ’ ಜತೆಗೆ ಕಾಜಲ್ ಕುಂದರ್ ನಟಿಸಿರುವ ಇನ್ನೊಂದು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರಂತೆ. ಅದು ಪೋಸ್ಟ್ ಪೊಡಕ್ಷನ್ ಹಂತದಲ್ಲಿದ್ದು, ಉಳಿದ ಮಾಹಿತಿ ಉಳಿದಂತೆ ಚಿತ್ರತಂಡ ಸದ್ಯದಲ್ಲಿ ಹಂಚಿಕೊಳ್ಳಲಿದೆಯಂತೆ. ಇದರ ಜತೆಗೆ ಇನ್ನು ಕೆಲವು ಸ್ಕ್ರಿಪ್ಟ್ ಕೇಳಿರುವ ಕಾಜಲ್ ಯಾವುದನ್ನೂ ೈನಲ್ ಮಾಡಿಲ್ಲವಂತೆ. ಕನ್ನಡದಲ್ಲಿ ಬಿಜಿ ಇರುವುದರಿಂದ ಬೇರೆ ಭಾಷೆಗಳ ಸಿನಿಮಾಗಳ ಬಗ್ಗೆ ಅಷ್ಟೇನೂ ಒಲುವು ತೋರಿಸದಿದ್ದರೂ, ಒಳ್ಳೆಯ ಅವಕಾಶಗಳು ಬಂದರೆ ನಟಿಸುವೆ ಎನ್ನುತ್ತಾರೆ.

ದೊಡ್ಮನೆ ಕುಟುಂಬದಿಂದ ಮೆಚ್ಚುಗೆ: ‘ಪೆಪೆ’ ಸಿನಿಮಾದ ಟೀಸರ್, ಸಾಂಗ್‌ಗೆ ನಟರಾದ ಶಿವರಾಜಕುಮಾರ್, ಸುದೀಪ್ ಹಾಗೂ ರಾಘವೇಂದ್ರ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಕಾಜಲ್ ಭೇಟಿಯಾಗಿದ್ದ ರಾಘವೇಂದ್ರ ನಟಿಯ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ನಟ ವಿನಯ್ ರಾಜಕುಮಾರ್ ಚಿತ್ರದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ತುಂಬಾ ಇಷ್ಟ ಎನ್ನುವ ಕಾಜಲ್, ಮುಯೂರ್ ಪಟೇಲ್, ಹಿರಿಯ ಕಲಾವಿದರಾದ ಶಶಿಧರ್ ಭಟ್, ಸುಧಾ, ಮೇದಿನಿ ಸೇರಿ ಹಲವರಿಂದ ಸಾಕಷ್ಟು ಕಲಿತಿದ್ದೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net