ಕಾಜಲ್ ಕಾಮಿಡಿ! : ‘ತೆನಾಲಿ ಡಿಎ ಎಲ್‌ಎಲ್‌ಬಿ’ಯಲ್ಲಿ ಕೋಮಲ್‌ಗೆ ಜೋಡಿಯಾದ ‘ಮ್ಯಾಂಗೋ ಪಚ್ಚ’ ಸೂಜಿ

ಕಾಜಲ್ ಕುಂದರ್
ಕಾಜಲ್ ಕುಂದರ್
Published on

ಪ್ರಮುಖ ಮುಖ್ಯಾಂಶಗಳು

  • ಮ್ಯಾಂಗೋ ಪಚ್ಚ ರಗಡ್ ಪಾತ್ರದ ಬಳಿಕ ನಗಿಸಲು ಮುಂದಾದ ಕಾಜಲ್ ಕುಂದರ್
  • ಕೋಮಲ್ ಜೋಡಿಯಾದ ಪೆಪೆ ಖ್ಯಾತಿಯ ನಟಿ
  • ಎರಡನೇ ಹಂತದ ಶೂಟಿಂಗ್ ನಲ್ಲಿ ಬಿಜಿಯಾದ ಕಾಜಲ್​
ಬೆಂಗಳೂರು: ಚಿತ್ರದಿಂದ ಚಿತ್ರಕ್ಕೆ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ನಟಿ ಕಾಜಲ್ ಕುಂದರ್ ಮಿಂಚುತ್ತಿದ್ದಾರೆ. ‘ಬಾಂಡ್ ರವಿ’, ‘ಕೆಟಿಎಂ’ನಲ್ಲಿ ಲವರ್ ಗರ್ಲ್, ‘ಬಿಳಿ ಚುಕ್ಕಿ, ಹಳ್ಳಿ ಹಕ್ಕಿ’, ‘ಮೇಘಾ’ದಲ್ಲಿ ಮುಗ್ಧೆ, ‘ಪೆಪೆ’ ಮತ್ತು ‘ಮ್ಯಾಂಗೋ ಪಚ್ಚ’ದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದ ಅವರು ಇದೀಗ ಮೊದಲ ಬಾರಿಗೆ ನಗಿಸಲು ಮುಂದಾಗುತ್ತಿದ್ದಾರೆ. ಕೋಮಲ್ ನಾಯಕನಾಗಿರುವ ‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾದಲ್ಲಿ ಕಾಜಲ್ ಕುಂದರ್ ಹಾಸ್ಯಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಎರಡನೇ ಹಂತದ ಶೂಟಿಂಗ್‌ನಲ್ಲಿದೆ. ಚಿತ್ರೀಕರಣ ಮಧ್ಯೆಯೇ ಕಾಜಲ್ ಸಿನಿಮಾ ಜರ್ನಿ ಕುರಿತು ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡರು. ‘‘ಮ್ಯಾಂಗೋ ಪಚ್ಚ’ ರಿಲೀಸ್ ಸಮಯದಲ್ಲಿ ಈ ಕಾಮಿಡಿ ಸಿನಿಮಾ ಸೆಟ್ಟೇರಿತ್ತು. ಇದೀಗ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಈ ಸಿನಿಮಾ ನನಗೆ ವಿಶೇಷ. ಹಾಗಂತ ನನ್ನ ಪಾತ್ರ ಔಟ್ ಆ್ಯಂಡ್ ಔಟ್ ಕಾಮಿಕ್ ಆಗಿರುವುದಿಲ್ಲ. ಬೇರೆ ಬೇರೆ ಆಯಾಮಗಳಿವೆ. ಅದೇನು ಅಂತ ಸಿನಿಮಾ ರಿಲೀಸ್ ಆದ ಬಳಿಕ ನಿಮಗೇ ಗೊತ್ತಾಗುತ್ತದೆ. ಬರವಣಿಗೆ ತುಂಬಾ ಚೆನ್ನಾಗಿದ್ದು, ವಿಭಿನ್ನತೆ ಇದೆ. ಯಾವುದೇ ಚಿತ್ರವಾಗಲಿ ನಾನು ಪಾತ್ರಕ್ಕಾಗಿ ವಿಶೇಷ ತಯಾರಿ ನಡೆಸಿದ್ದು ಕಡಿಮೆ. ಆದರೆ, ಸ್ಕ್ರಿಪ್ಟ್‌ಅನ್ನು ಹಲವು ಬಾರಿ ಓದುತ್ತೇನೆ. ಅದರಲ್ಲಿ ತನ್ಮಯಳಾದಾಗ ಆ ಪಾತ್ರದಲ್ಲಿ ಜೀವಿಸಲು ಸಾಧ್ಯವಾಗುತ್ತದೆ. ಇನ್ನು ಕೋಮಲ್ ಸರ್ ಕಾಮಿಡಿ ಟೈಮಿಂಗ್, ಸ್ಥಳದಲ್ಲಿಯೇ ಪಾತ್ರಕ್ಕೆ ಹೊಸತನ ಕೊಡುವುದು ಅವರ ನಟನೆಯ ವಿಶೇಷ. ಅದು ನಮಗೆ ಕಲಿಕೆ ಕೂಡ. ಈ ವರ್ಷವೇ ಸಿನಿಮಾ ತೆರೆ ಮೇಲೆ ಬರಲಿದೆ’ ಎಂದು ಹೇಳಿಕೊಳ್ಳುತ್ತಾರೆ.
‘ಸೂಜಿ’ಗೆ ಒಳ್ಳೆಯ ಪ್ರತಿಕ್ರಿಯೆ
ನಟಿ ಕಾಜಲ್ ಕುಂದರ್ ಅಭಿನಯದ ಹಿಂದಿನ ಸಿನಿಮಾ ‘ಮ್ಯಾಂಗೋ ಪಚ್ಚ’ದ ಸೂಜಿ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿರುವುದು, ಕಾಜಲ್‌ಗೆ ಇನ್ನಿಲ್ಲದ ಖುಷಿ ನೀಡಿದೆ. ‘‘ಪೆಪೆ’ ರೀತಿಯ ಪಾತ್ರವಾದರೂ, ಸ್ವಲ್ಪ ಗಂಭೀರತೆ ಇತ್ತು. ಸುದೀಪ್ ಸರ್ ಸೇರಿ ತುಂಬಾ ಜನ ನನ್ನ ಪಾತ್ರ ನೋಡಿ ಮೆಚ್ಚಿದ್ದಾರೆ’ ಎನ್ನುವ ಕಾಜಲ್ ಕುಂದರ್ ಸದ್ಯ ಎರಡು-ಮೂರು ಸ್ಕ್ರಿಪ್ಟ್ ಕೇಳಿದ್ದು, ಯಾವುದನ್ನೂ ಫೈನಲ್ ಮಾಡಿಲ್ಲವಂತೆ. ಅವರು ಉತ್ತಮ ಡಾನ್ಸರ್ ಆಗಿದ್ದು, ಸದ್ಯ ಡಾನ್ಸ್ ಓರಿಯೇಂಟೆಡ್ ಹಾಗೂ ರೊಮ್ಯಾಂಟಿಕ್-ಕಾಮಿಡಿ ಜಾನರ್ ಸಿನಿಮಾಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net