ಜೈಲಿನಿಂದ ಬಿಡುಗಡೆಯಾದ ನಟಿ ಹೇಮಾ

hema
Published on

ಬೆಂಗಳೂರು: ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ತೆಲುಗು ನಟಿ ಹೇಮಾ ಶುಕ್ರವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಶೇಷ ನ್ಯಾಯಾಲಯವು ಬುಧವಾರವೇ ಆರೋಪಿ ಹೇಮಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಷರತ್ತುಗಳನ್ನು ಪೂರೈಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಶುಕ್ರವಾರ ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಮೇ ೧೯ರಂದು ಹೈದರಾಬಾದ್ ಮೂಲದ ವಾಸು ಎಂಬಾತನ ಹುಟ್ಟುಹಬ್ಬದ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾ ಸೇರಿ ೧೦೩ ಮಂದಿಯನ್ನು ವಶಕ್ಕೆ ಪಡೆದಿದ್ದರು. ಸ್ಥಳದಲ್ಲಿ ವಿವಿಧ ಮಾದರಿಯ ಮಾದಕವಸ್ತು ಜಪ್ತಿ ಮಾಡಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಹೇಮಾ ಸೇರಿ ೮೬ ಮಂದಿ ಪಾರ್ಟಿಯಲ್ಲಿ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿತ್ತು. ರೇವ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಟಿ ಹೇಮಾಗೆ ಎರಡು ಬಾರಿ ನೋಟಿಸ್ ನೀಡಿತ್ತು. ಮೊದಲ ನೋಟಿಸ್ ಜಾರಿ ವೇಳೆ ಅನಾರೋಗ್ಯದ ನೆಪಹೇಳಿ ವಿಚಾರಣೆಗೆ ಗೈರಾಗಿದ್ದರು. ಎರಡನೇ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಜೂ.೬ರಂದು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ೮ ದಿನಗಳ ಕಾಲ ಜೈಲುವಾಸದ ಬಳಿಕ ನಟಿ ಹೇಮಾ ಷರತ್ತುಬದ್ಧ ಜಾಮೀನು ಮಂಜೂರಾದ ಮೇರೆಗೆ ಬಿಡುಗಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net