

ಬೆಂಗಳೂರು: ದರ್ಶನ್ ನಟನೆಯ ಯಜಮಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡಿದ್ದ ನಟಿ ಛಾಯಾಶ್ರೀ ಉಮೇಶ್ ಬಳಿಕ ಕವಿ ರಾಜೇಶ್ ನಿರ್ದೇಶನದ ‘ಪೊಲಿಟಿಕ್ಸ್ ಕಲ್ಯಾಣ’, ಕೌಶಲ್ಯಾ ಸುಪ್ರಜಾ ರಾಮ’ದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ತೆರೆಕಂಡಿದ್ದ ‘ಕಬಂಧ’ದಲ್ಲಿ ನಟ ಕಿಶೋರ್‌ಗೆ ಜೋಡಿಯಾಗಿದ್ದರು. ಇಂತಹ ಛಾಯಾಶ್ರೀಗೆ ಪ್ರತಿ ವರ್ಷದ ನವರಾತ್ರಿಯೂ ಸ್ಪೆಷಲ್ ಅಂತೆ. ಅದಕ್ಕೆ ಕಾರಣ, ‘ನನ್ನೂರು ಮೈಸೂರು’ ಅಂತಾರೆ. ಚಿಕ್ಕಂದಿನಿಂದಲೂ ಮೈಸೂರು ದಸರಾವನ್ನು ಕುತೂಹಲದ ಕಣ್ಣಿನಿಂದ ನೋಡಿಕೊಂಡು ಬಂದಿರುವ ಅವರಿಗೆ, ಈ ಬಾರಿ ಅವರೇ ನಟಿಸಿರುವ ಚಿತ್ರವು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಖುಷಿ. ಇದೇ ಸಂಭ್ರಮದಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ನಾನು ಮೈಸೂರಿನವಳಾದ ಕಾರಣ ನಮಗೆ ನಮ್ಮ ಪ್ರಥಮ ಭಕ್ತಿ ತಾಯಿ ಚಾಮುಂಡೇಶ್ವರಿಗೆ ಸಮರ್ಪಣೆ. ಹಾಗಾಗಿ ನಮಗೆ ಪ್ರತಿ ದಿನವೂ ದಸರಾ ಆಚರಣೆಯೇ. ಮನೆಯಲ್ಲಿ ಒಂಬತ್ತು ದಿನಗಳ ಕಾಲ ಪೂಜೆ ಮಾಡಿ, ಚಾಮುಂಡೇಶ್ವರಿ ಸ್ತೋತ್ರಗಳನ್ನು ಪಠಣ ಮಾಡುತ್ತೇವೆ. ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಇರುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಛಾಯಾಶ್ರೀ.
ಮರೆಯಲಾರದ ನೆನಪುಗಳಿವೆ: ಮೈಸೂರಿನವರೇ ಆದ ಛಾಯಾಶ್ರೀಗೆ ದಸರಾದ ಮರೆಯಲಾರದ ನೆನಪುಗಳಿವೆ. ಪ್ರತಿ ವರ್ಷವೂ ಯಾವ ಕಾರ್ಯಕ್ರಮವನ್ನೂ ಬಿಡದೇ ವೀಕ್ಷಿಸುತ್ತಿದ್ದರಂತೆ. ‘ಶಾಲೆ-ಕಾಲೇಜು ದಿನಗಳಲ್ಲಿ ರಜೆ ಇರುತ್ತಿದ್ದ ಕಾರಣ ನಾವು ಇಡೀ ಹಬ್ಬದ ಒಂಬತ್ತು ದಿನವೂ ಯಾವ ಕಾರ್ಯಕ್ರಮವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಯುವ ದಸರಾ, ರೈತ ದಸರಾ, ದರ್ಬಾರ್, ಮೆರವಣಿಗೆ, ಸರ್ಕಸ್… ಹೀಗೆ ಎಲ್ಲವನ್ನೂ ನೋಡುತ್ತಿದ್ದೆವು. ಹೀಗಾಗಿ ನನಗೆ ನೂರಾರು ನೆನಪುಗಳಿವೆ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಶೂಟಿಂಗ್ ಬಿಜಿ ಇರುವ ಕಾರಣ ಆಯ್ದ ದಿನಗಳಲ್ಲಿ ಮಾತ್ರ ದಸರಾಕ್ಕೆ ತೆರಳುತ್ತೇನೆ’ ಎನ್ನುತ್ತಾರೆ.
ಚಲನಚಿತ್ರೋತ್ಸವದಲ್ಲಿ ‘ಕಬಂಧ’ ಪ್ರದರ್ಶನ: ನಟಿ ಛಾಯಾಶ್ರೀ ಚಿತ್ರರಂಗಕ್ಕೆ ಬರುವ ಮೊದಲು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅವರು ಅವರು ನಾಟಕ ಪ್ರದರ್ಶಿಸಿದ್ದರಂತೆ. ‘ಕೆಲ ವರ್ಷಗಳ ಹಿಂದೆ ಎಕ್ಸಿಬಿಷನ್ ಮೈದಾನದಲ್ಲಿ ಆಯೋಜಿಸಿದ್ದ ನಾಟಕ ಸಂಭ್ರಮದಲ್ಲಿ ನಮ್ಮ ತಂಡದಿಂದ ‘ಚಾಮ ಚೆಲುವೆ’, ‘ಚೋರ ಚರಣದಾಸ’ ನಾಟಕಗಳನ್ನು ಪ್ರದರ್ಶನ ಮಾಡಿದ್ದೆವು. ಕಾಲೇಜು ದಿನಗಳಲ್ಲಿ ‘ಯುವ ದಸರಾ’ದಲ್ಲಿ ನೃತ್ಯ ಪ್ರದರ್ಶನ ನೀಡಿದ್ದೆ. ಈ ಬಾರಿ ನಾನು ನಟಿಸಿರುವ ‘ಕಬಂಧ’ ಚಿತ್ರ ಸೋಮವಾರ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಹೀಗಾಗಿ ಈ ಬಾರಿಯ ದಸರಾ ವಿಶೇಷ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಎರಡು ಕಥೆ ಕೇಳಿದ್ದೇನೆ:‘ಕಬಂಧ’ದ ಬಳಿಕ ಛಾಯಾಶ್ರೀ ಎರಡು ಮೂರು ಕಥೆಗಳನ್ನು ಕೇಳಿದ್ದಾರಂತೆ. ‘ಎರಡು ಸ್ಕ್ರಿಪ್ಟ್‌ಗಳು ಓಕೆ ಆಗಿದ್ದು, ಸದ್ಯ ಮಾತುಕತೆ ಹಂತದಲ್ಲಿವೆ. ಅಲ್ಲದೇ ಹಲವು ಸಿನಿಮಾಗಳಿಗೆ ಈಗಾಗಲೇ ಆಡಿಷನ್ಸ್ ನೀಡಿದ್ದೇನೆ. ನೋಡೋಣ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.