

ಬೆಂಗಳೂರು: ನಟಿ ಭಾಮಾ ಇನ್ಸ್ಟಾಗ್ರಾಮ್ನಲ್ಲಿ ಮದುವೆ, ವರದಕ್ಷಿಣೆ ಬಗ್ಗೆ ,ಮಹಿಳೆಯರ ಪಾತ್ರಗಳ ಬಗ್ಗೆ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
ಹೆಣ್ಣು ಮಕ್ಕಳಿಗೆ ನಿಜಕ್ಕೂ ಮದುವೆ ಬೇಕಾ? ಬೇಡ, ನಿಜಕ್ಕೂ ಬೇಡ. ತಮ್ಮ ಹಣವನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಆಗಬೇಕಾ? ಖಂಡಿತ ಬೇಕಾಗಿಲ್ಲ. ಅವರು ನಿಮ್ಮನ್ನು ತೊರೆದರೆ ಕಥೆಯೇನು? ನಮ್ಮ ಹಣದಿಂದ ಅವರು ಸುಖವಾಗಿ ಬದುಕುತ್ತಾರೆ. ಆದರೆ ನಾವು ಮದುವೆ ಆಗದೇ ಒಂಟಿಯಾಗಿ ಬದುಕಬೇಕು. ನಿಮ್ಮ ಬಾಳಿಗೆ ಬರುವ ವ್ಯಕ್ತಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಇರುವುದಿಲ್ಲ ಎಂದು ಭಾಮಾ ಬರೆದುಕೊಂಡಿದ್ದಾರೆ.
ಭಾಮಾ ಮತ್ತು ಅರುಣ್ 2020ರಲ್ಲಿ ವಿವಾಹವಾದರು. ಬಳಿಕ ನಟಿ ನಟನೆಯಿಂದ ಬ್ರೇಕ್ ತೆಗೆದುಕೊಂಡರು. ಮಗಳು ಗೌರಿ ಜನಿಸಿದ ನಂತರ ಕುಟುಂಬದ ಜತೆ ಕಾಲ ಕಳೆಯುತ್ತಿದ್ದರು. ಆದರೆ ಒಂದು ದಿನ ಏಕಾಏಕಿ ಪತಿ ಜತೆಗೆ ಇದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದರು. ಮತ್ತಷ್ಟು ವಿಚ್ಛೇದನ ಊಹಾಪೋಹ ಶುರುವಾಗಿದ್ದವು.
ಈಗಾಗಲೇ ಪತಿಯಿಂದ ದೂರವಾಗಿ ಮಗಳ ಜತೆ ಇದ್ದಾರೆ. ಸಿಂಗಲ್ ಪೇರೆಂಟ್ ಎಂದು ಅನೌನ್ಸ್ ಕೂಡ ಮಾಡಿದ್ದರು. ಈಗ ಹೆಣ್ಣು ಮಕ್ಕಳು ಯಾಕೆ ಮದುವೆ ಆಗಬೇಕು? ಎನ್ನುವ ಅರ್ಥದಲ್ಲಿ ಭಾಮಾ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಭಾಮಾ ಇನ್‌ಸ್ಟಾಗ್ರಾಮ್ ಪೋಸ್ಟ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೆಣ್ಣು ಮಕ್ಕಳು ಮದುವೆ ಆಗಲೇಬಾರದಾ? ಎಂದು ಕೆಲವರು ಪ್ರಶ್ನಿಸಿದ್ದರು. ಬಳಿಕ ತಮ್ಮ ಪೋಸ್ಟ್ ಬಗ್ಗೆ ನಟಿ ಭಾಮಾ ಸ್ಪಷ್ಟನೆ ನೀಡಿದ್ದಾರೆ. "ನನ್ನ ಪೋಸ್ಟ್‌ನಲ್ಲಿ ನಾವು ಹೆಂಗಸರು ವರದಕ್ಷಿಣೆ ಕೊಟ್ಟು ಮದುವೆಯಾಗಬೇಕಾಗಿಲ್ಲ ಎಂದಿದ್ದೆ. ವರದಕ್ಷಿಣೆ ನೀಡಿ ಮದುವೆ ಆಗುವುದರಿಂದ ಆಗುವ ಪರಿಣಾಮಗಳ ಬಗ್ಗೆ ಬರೆದಿದ್ದೇನೆ. ಮದುವೆಯ ನಂತರ ಹಣಕ್ಕಾಗಿ ಮಹಿಳೆಯರ ಮೇಲೆ ಒತ್ತಡ ಹೇರಲಾಗುತ್ತದೆ, ಇದರಿಂದಾಗಿ ಅವರು ತಮ್ಮ ಸ್ವಂತ ಜೀವಕ್ಕೆ ಬೆದರಿಕೆಯೊಂದಿಗೆ ಮನೆಯಲ್ಲಿ ಭಯದಿಂದ ಬದುಕಬೇಕಾಗಿದೆ. ಅವಳೊಂದಿಗೆ ಮಕ್ಕಳು ಇದ್ದಾಗ ಹೆಣ್ಣಿನ ಮನಸ್ಥಿತಿ ಎಲ್ಲಕ್ಕಿಂತ ಮಿಗಿಲಾದದ್ದು. ಇದನ್ನೇ ನಾನು ಹೇಳಲು ಪ್ರಯತ್ನಿಸಿದ್ದು" ಎಂದಿದ್ದಾರೆ.