ಡಿಯರ್ ಅರ್ಚನಾ ವಿಜಯಾನಂದ: ಮೊದಲ ಪ್ಯಾನ್ ಇಂಡಿಯಾ ಸಂಭ್ರಮದಲ್ಲಿ ನಟಿ

Vijayanand
Published on

ಬೆಂಗಳೂರು: ನಟಿ ಅರ್ಚನಾ ಕೊಟ್ಟಿಗೆ ‘ದಿಗ್ವಿಜಯ’ದ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ‘ವಿಜಯಾನಂದ’ ಚಿತ್ರ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ‘ಅರಣ್ಯಕಾಂಡ’ ಚಿತ್ರದ ಮೂಲಕ 2018ರಲ್ಲಿ ಪದಾರ್ಪಣೆ ಮಾಡಿದ ಅರ್ಚನಾ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ಮೇಡ್ ಇನ್ ಬೆಂಗಳೂರು’, ‘ಡಿಯರ್ ಸತ್ಯಾ’, ‘ಕಟ್ಟಿಂಗ್ ಶಾಪ್’, ಇತ್ತೀಚೆಗಷ್ಟೆ ಬಿಡುಗಡೆಯಾದ ‘ಯೆಲ್ಲೋ ಗ್ಯಾಂಗ್ಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ವಿಜಯಾನಂದ’ ಚಿತ್ರದ ಮೂಲಕ ಮೊದಲ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಈ ಬಗ್ಗೆ ವಿಜಯವಾಣಿ ಜತೆ ಸಂತಸ ಹಂಚಿಕೊಂಡ ಅವರು, ‘ನಾನು ಡಾ. ಆನಂದ ಸಂಕೇಶ್ವರ ಸರ್ ಪತ್ನಿ ವಾಣಿ ಸಂಕೇಶ್ವರ ಮೇಡಂ ಪಾತ್ರದಲ್ಲಿ ನಟಿಸಿದ್ದೇನೆ. ಕನ್ನಡಿಗರು, ಕನ್ನಡದ ಸಾಧಕನ ಬಗ್ಗೆ ಮಾಡಿರುವ ಮೊದಲ ಬಯೋಪಿಕ್ ಇದು. ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ ಕೂಡ. ಅನಂತ್ ನಾಗ್ ಸರ್ ಜತೆ ನಟಿಸಬೇಕು ಎಂಬ ಆಸೆ ಮೊದಲಿಂದಲೂ ಇತ್ತು. ನಿರ್ದೇಶಕಿಯೊಬ್ಬರ ಜತೆ ಸಿನಿಮಾ ಮಾಡಬೇಕು ಅಂತಲೂ ಅಂದುಕೊಂಡಿದ್ದೆ. ಆ ಆಸೆಗಳು ಈ ಚಿತ್ರದ ಮೂಲಕ ನೆರವೇರಿವೆ. ಅನಂತ್ ಸರ್ ಹೇಗೆ ನಟಿಸುತ್ತಾರೆ ಅಂತ ನೋಡಲೆಂದೇ ನಾನು ಚಿತ್ರೀಕರಣಕ್ಕೆ ಎರಡು ದಿನ ಮೊದಲೇ ಹೋಗಿದ್ದೆ. ಬ್ರೇಕ್ ಸಮಯದಲ್ಲಿ ಅವರ ಜತೆ ಮಾತನಾಡುತ್ತಿದ್ದೆ. ನಿರ್ದೇಶಕಿ ರಿಷಿಕಾ ಅವರಿಂದಲೂ ತುಂಬ ಕಲಿತೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಹಾಗೆಯೇ ಚಿತ್ರೀಕರಣದ ಸಮಯದಲ್ಲಾದ ಅನುಭವಗಳನ್ನು ಹೇಳಿಕೊಳ್ಳುವ ಅರ್ಚನಾ, ‘ಹುಬ್ಬಳ್ಳಿಯಲ್ಲಿ ಚಿತ್ರೀಕರಣ ಮಾಡುವಾಗ ಡಾ. ವಿಜಯ ಸಂಕೇಶ್ವರ ಸರ್ ಪತ್ನಿ ಲಲಿತಾ ಮೇಡಂ ಒಮ್ಮೆ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ದರು. ಸೆಟ್ ಮನೆಯೊಳಗೆ ತುಂಬ ಧೂಳಿದ್ದ ಕಾರಣ ಅವರು ಹೊರಗೆ ಚೇರ್​ನಲ್ಲಿ ಕುಳಿತಿದ್ದರು. ನನ್ನನ್ನು ನೋಡಿ, ಒಳಗೆ ಹೋಗಿ ಶೂಟಿಂಗ್ ನೋಡಬಹುದಾ? ಚಿತ್ರೀಕರಣಕ್ಕೆ ತೊಂದರೆ ಆಗಬಾರದು ಅಂತ ಪರ್ವಿುಷನ್ ಕೇಳುತ್ತಿದ್ದೇನೆ ಎಂದರು. ಅವರ ಸರಳತೆ, ಮುಗ್ಧತೆ ನೋಡಿ ನನಗೆ ಆಶ್ಚರ್ಯವೇ ಆಯಿತು. ಡಾ. ಆನಂದ ಸಂಕೇಶ್ವರ ಸರ್ ಕೂಡ ಸೆಟ್​ಗೆ ಬರುತ್ತಿದ್ದರು. ಎಷ್ಟೊಂದು ಸರಳ ಅವರು. ಎಷ್ಟು ಎತ್ತರಕ್ಕೆ ಬೆಳೆದಿದ್ದರೂ ಅವರ ಸರಳತೆ ಎಲ್ಲರಿಗೂ ಮಾದರಿ. ಅಂತಹ ಹಲವು ನಿದರ್ಶನಗಳಿವೆ. ನನಗೆ ಈ ಸಿನಿಮಾ, ದಿಗ್ಗಜರ ಬಗ್ಗೆ ತಿಳಿಯಲು, ಆಕ್ಟಿಂಗ್ ಕಲಿಯಲು ಒಂದೊಳ್ಳೆ ಅವಕಾಶ’ ಎಂದು ನೆನಪುಗಳ ಬುತ್ತಿ ಬಿಚ್ಚಿಡುತ್ತಾರೆ. ಹಾಗೆಯೇ, ‘ಡಾ. ವಿಜಯ ಸಂಕೇಶ್ವರ ಅವರ ಸಾಧನೆಗಳ ಬಗ್ಗೆ ಕನ್ನಡಿಗರಿಗೆ ಗೊತ್ತು. ಅವರ ಯಶೋಗಾಥೆ ಇಡೀ ಭಾರತಕ್ಕೆ ಗೊತ್ತಾಗಬೇಕು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ವಿಜಯಾನಂದ’, ಇದೇ ಡಿ. 9ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

‘ವಿಜಯಾನಂದ’ ಚಿತ್ರಕ್ಕೆ ಕನ್ನಡದಲ್ಲಿ ಕೋಟಿ ಸಲಾಂ!

‘ವಿಜಯಾನಂದ’ ಟ್ರೇಲರ್​ಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ 10 ದಿನಗಳ ಹಿಂದೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾದ ಕನ್ನಡ ಟ್ರೇಲರ್​ಅನ್ನು ಬರೋಬ್ಬರಿ 1.12 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕನ್ನಡಿಗನ ಯಶೋಗಾಥೆಗೆ ಪರರಾಜ್ಯದವರೂ ಮನಸೋತಿದ್ದು, ಹಿಂದಿ ಭಾಷೆಯಲ್ಲಿ 71 ಲಕ್ಷ ವ್ಯೂವ್ಸ್, ತೆಲುಗಿನಲ್ಲಿ 49 ಲಕ್ಷ, ತಮಿಳು ಟ್ರೇಲರ್​ಅನ್ನು 40 ಲಕ್ಷ ಹಾಗೂ ಮಲಯಾಳಂನಲ್ಲಿ 26 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹೀಗೆ ಐದು ಭಾಷೆಗಳಿಂದ ‘ವಿಜಯಾನಂದ’ ಟ್ರೇಲರ್​ಅನ್ನು ಬರೋಬ್ಬರಿ ಮೂರು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net