ಬಾಲಯ್ಯನನ್ನು ಸಮರ್ಥಿಸಿಕೊಂಡ ನಟಿ ಅಂಜಲಿ : ಏನಂದ್ರು ನೆಟ್ಟಿಗರು?

Untitled-design-3
Published on

ಹೈದರಾಬಾದ್​​ : ಸಿನಿಮಾ ಸೆಲಿಬ್ರಿಟಿಗಳು ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಜಾಗೃತರಾಗಿರುತ್ತಾರೆ. ಏಕೆಂದರೆ ಲಕ್ಷಾಂತರ ಅಭಿಮಾನಿಗಳು ನಮ್ಮನ್ನು ವೀಕ್ಷಿಸುತ್ತಾರೆ. ನಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಬಾರದು ಎಂಬುದು ಅವರ ಉದ್ದೇಶವಾಗಿರುತ್ತದೆ.

ಅದಕ್ಕೆ ತದ್ವಿರುದ್ಧ ಎಂಬಂತೆ ಕೆಲವೊಂದು ಘಟನೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಟಾಲಿವುಡ್​ನ ಪ್ರಸಿದ್ಧ ನಟ ನಂದಮೂರಿ ಬಾಲಕೃಷ್ಣ ಅವರ ವೀಡಿಯೊ ವೈರಲ್​ ಆಗಿ ವಿವಾದವನ್ನು ಉಂಟುಮಾಡಿತ್ತು. ವೈರಲ್​ ಆಗಿರುವ ವೀಡಿಯೊದಲ್ಲಿ ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ನಟ ಬಾಲಕೃಷ್ಣ ತಳ್ಳಿದ್ದಾರೆ. ಬಾಲಯ್ಯ ಅವರ ಈ ವರ್ತನೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.

ಬಾಲಯ್ಯ ಅವರನ್ನು ಸಮರ್ಥಿಸುವ ಮೂಲಕ ಘಟನೆ ಬಗ್ಗೆ ನಟಿ ಅಂಜಲಿ ಮೌನ ಮುರಿದಿದ್ದಾರೆ. ತಮ್ಮ ಎಕ್ಸ್​​ ಖಾತೆಯಲ್ಲಿ ಗ್ಯಾಂಗ್ಸ್ ಆಫ್ ಗೋದಾವರಿಯ ಪ್ರಚಾರ ಸಮಾರಂಭದ ಮತ್ತೊಂದು ವೀಡಿಯೊವನ್ನು ಅಂಜಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಬಾಲಯ್ಯ ಮತ್ತು ನಟಿ ಅಂಜಲಿ ಹೈ-ಫೈವಿಂಗ್, ಇಬ್ಬರು ನಗುತ್ತಿರುವುದರ ಜತೆಗೆ ನಂದಮೂರಿ ಬಾಲಕೃಷ್ಣ ಅಂಜಲಿಯನ್ನು ತಳ್ಳುತ್ತಿರುವ ಕ್ಲಿಪ್​ ಕೂಡ ಇದೆ.

ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ-ರಿಲೀಸ್ ಈವೆಂಟ್​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಲಕೃಷ್ಣ ಅವರಿಗೆ ಧನ್ಯವಾದ ಎಂದು ಹೇಳಿರುವ ನಟಿ ಅಂಜಲಿ "ನಾವು ಬಹಳ ಸಮಯದಿಂದ ಉತ್ತಮ ಸ್ನೇಹದ ಜತೆಗೆ ಪರಸ್ಪರ ಗೌರವವನ್ನು ಹೊಂದಿದ್ದೇವೆ ಎಂದು ವ್ಯಕ್ತಪಡಿಸಲು ಬಯಸುತ್ತೇನೆ. ಅವರೊಂದಿಗೆ ಮತ್ತೊಮ್ಮೆ ವೇದಿಕೆ ಹಂಚಿಕೊಳ್ಳುವುದು ಅದ್ಭುತವಾಗಿದೆ" ಎಂದು ತಿಳಿಸಿದ್ದಾರೆ.

ನಟಿ ಅಂಜಲಿ ಸ್ಪಷ್ಟನೆ ಈಗ ಟ್ರೋಲ್​ ಆಗುತ್ತಿದೆ. "ಇದೆಲ್ಲಾ ಸುಳ್ಳು", "ಇದು ಒತ್ತಾಯಪೂರ್ವಕ ಟ್ವೀಟ್", ​"ಈಗ ಅವನನ್ನು ಸಮರ್ಥಿಸುವುದು ತುಂಬಾ ತಡವಾಗಿದೆ" ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net