ಗೃಹಬಂಧನದಲ್ಲಿ ಆಲಿಯಾ ಭಟ್; ಮದುವೆಗೂ ಮುನ್ನ ಹೀಗೊಂದು ಭಯ

Aliya
Published on

ಏಪ್ರಿಲ್ 14ಕ್ಕೆ ಭಾರತೀಯ ಚಿತ್ರರಂಗದಲ್ಲಿ ಎರಡು ಮಹತ್ವದ ಘಟನೆಗಳು ನಡೆಯಲಿಕ್ಕಿವೆ. ಒಂದು ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್ 2’ ಬಿಡುಗಡೆಯಾದರೆ, ಇನ್ನೊಂದೆಡೆ ಅದೇ ದಿನ ಬಾಲಿವುಡ್​ನ ಜನಪ್ರಿಯ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಆಗುತ್ತಿದ್ದಾರೆ. ಅವರಿಬ್ಬರ ಮದುವೆ ಮುಂಬೈನಲ್ಲಿ ನಡೆಯಲಿದ್ದು, ಈಗಾಗಲೇ ತಯಾರಿ ಜೋರಾಗಿ ನಡೆಯದಿದೆಯಂತೆ.

ಈ ಮಧ್ಯೆ, ಆಲಿಯಾ ಭಟ್ ಅವರನ್ನು ಅವರ ಮನೆಯವರು ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣ ಏನು ಗೊತ್ತಾ? ಮದುವೆ ಬಗ್ಗೆ ವರದಿ ಮಾಡುವುದಕ್ಕೆ ಪತ್ರಕರ್ತರು ಮತ್ತು ಪಾಪರಾಜಿಗಳು ದೊಡ್ಡ ಮಟ್ಟದಲ್ಲಿ ತುದಿಗಾಲಲ್ಲಿ ನಿಂತಿದ್ದಾರಂತೆ. ಆಲಿಯಾ ಮತ್ತು ಅವರ ಕುಟುಂಬದವರು ಮನೆಯಿಂದ ಹೊರಬಂದರೆ ಸಾಕು, ಅವರನ್ನು ನಿಲ್ಲಿಸಿಕೊಂಡು ಮದುವೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆಯಂತೆ. ಮೊದಲೇ ರಣಬೀರ್ ಮತ್ತು ಆಲಿಯಾ ಇಬ್ಬರೂ ಈ ಮದುವೆಯನ್ನು ರಹಸ್ಯವಾಗಿಟ್ಟಿದ್ದಾರೆ. ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದಾರೆ. ಮಿಕ್ಕಂತೆ ಎಲ್ಲ ವಿಷಯಗಳನ್ನು ಗೌಪ್ಯವಾಗಿಡಲಾಗಿದೆ.

ಹೀಗಿರುವಾಗ, ಪಾಪರಾಜಿಗಳು ಎಲ್ಲಿ ಮದುವೆ ವಿಷಯಗಳನ್ನು ಕೆದಕುತ್ತಾರೋ ಎಂಬ ಭಯದಿಂದ, ಎರಡೂ ಕುಟುಂಬದವರು ಬಹಿರಂಗವಾಗಿ ಓಡಾಡುವುದಕ್ಕೆ ಹೆದರುತ್ತಿದ್ದಾರಂತೆ. ಅದೇ ಕಾರಣಕ್ಕೆ ಮದುಮಕ್ಕಳು ಎಲ್ಲೂ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದ್ದು, ಅದರಲ್ಲೂ ಆಲಿಯಾ ಅವರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ರಣಬೀರ್ ಮತ್ತು ಆಲಿಯಾ ಮದುವೆ ಏ.14ಕ್ಕೆ ಫಿಕ್ಸ್ ಆಗಿದ್ದು, 16ರಂದು ಆರತಕ್ಷತೆ ನಡೆಯಲಿದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net