ಮಿಡ್ಲಕ್ಲಾಸ್​ ಯುವ: ಕುತೂಹಲ ಮೂಡಿಸಿದ ನಟನ ಎರಡನೇ ಚಿತ್ರದ ಪೋಸ್ಟರ್

yuva 2
Published on

ಬೆಂಗಳೂರು: ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಆದವರು ನಟ ಯುವ ರಾಜಕುಮಾರ್. ಇದೀಗ ‘ದೊಡ್ಮನೆ ಕುಡಿ’ ಎರಡನೇ ಸಿನಿಮಾ ಘೋಷಣೆಯಾಗಿದೆ. ಸದ್ಯಕ್ಕೆ ಚಿತ್ರಕ್ಕೆ ‘ಯುವ-2’ ಎಂದು ಇಡಲಾಗಿದ್ದು, ನಿರ್ದೇಶಕ ರೋಹಿತ್ ಪದಕಿ ಈ ಚಿತ್ರದ ಮೂಲಕ ಬೆಂಗಳೂರು ಮಧ್ಯಮ ವರ್ಗದ ಜನರ ಜೀವನದ ಕಥೆಯನ್ನು ಹೇಳುತ್ತಿದ್ದಾರೆ. ದಸರಾ ಹಬ್ಬಕ್ಕೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಲಾಂಗ್ ಹಿಡಿದಿರುವ ಕೈ ರಕ್ತಸಿಕ್ತವಾಗಿದ್ದು, ರತ್ನ ಎಂದು ಹಚ್ಚೆ ಇದೆ. ಪೋಸ್ಟರ್ ಕುತೂಹಲ ಮೂಡಿಸುವಂತಿದೆ. ಉಳಿದಂತೆ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್‌ಲುಕ್‌ನ್ನು ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ರೋಹಿತ್ ಪದಕಿ, ‘ಸದ್ಯ ಚಿತ್ರದ ಬರವಣಿಗೆ ಪೂರ್ಣಗೊಂಡಿದ್ದು, ಪ್ರೀ ಪ್ರೊಡಕ್ಷನ್ ಕಾರ್ಯಗಳನ್ನು ಶುರು ಮಾಡಿಕೊಂಡಿದ್ದೇವೆ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು. ಉಳಿದಂತೆ ಹಿಮಾಲಯ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ನಡೆಸಲಿದ್ದೇವೆ. ಇನ್ನು ವಾರದಲ್ಲಿ ಕಲಾ ಬಳಗದ ಆಯ್ಕೆ ಪ್ರಕ್ರಿಯೆ ಆರಂಭಿಸಲಿದ್ದೇವೆ. ಜತೆಗೆ ನನ್ನ ನಿರ್ದೇಶನದ ‘ಉತ್ತರಕಾಂಡ’ ಚಿತ್ರದ ಮುಂದಿನ ಭಾಗದ ಶೂಟಿಂಗ್ ಬೆಳಗಾವಿಯಲ್ಲಿ ಫೆಬ್ರವರಿಯಿಂದ ಆರಂಭಿಸುತ್ತೇವೆ. ಆ ವೇಳೆಗಾಗಲೇ, ಈ ಚಿತ್ರದ ಕೆಲ ಭಾಗ ಶೂಟಿಂಗ್ ಮಾಡಿಕೊಳ್ಳುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ.

ಎರಡು-ಮೂರು ಶೀರ್ಷಿಕೆ: ಚಿತ್ರಕ್ಕೆ ಯುವ ರಾಜಕುಮಾರ್ ಆಯ್ಕೆ ಹಾಗೂ ಶೀರ್ಷಿಕೆ ಕುರಿತಂತೆ ರೋಹಿತ್, ‘ಈ ಕಥೆಯನ್ನು ಮೊದಲಿಗೆ ನಿರ್ಮಾಪಕರಿಗೆ ಹೇಳಿದಾಗ, ಆಗ ನಮಗೆಲ್ಲಾ ಬಂದಿದ್ದೆ ಯುವರಾಜ ಕುಮಾರ್‌ಗೆ ಹೆಸರು. ಅವರನ್ನು ಸಂಪರ್ಕಿಸಿದಾಗ ಕಥೆ ಕೇಳಿ ಅವರು ಕೂಡ ಒಪ್ಪಿಗೆ ಸೂಚಿಸಿದರು. ಹಾಗಾಗಿ, ಅವರನ್ನೇ ನಾಯಕನಟನಾಗಿ ಆಯ್ಕೆ ಮಾಡಲಾಯಿತು. ಇನ್ನು ಚಿತ್ರಕ್ಕೆ ಎರಡು-ಮೂರು ಶೀರ್ಷಿಕೆಗಳನ್ನು ಆಯ್ದುಕೊಳ್ಳಲಾಗಿದೆ. ಅದರಲ್ಲಿ ಒಂದನ್ನು ಅಂತಿಮಗೊಳಿಸಲಾಗುವುದು. ಅದಕ್ಕೆ ಸದ್ಯಕ್ಕೆ ‘ಯುವ-2’ ಎಂದು ತಾತ್ಕಾಲಿಕವಾಗಿ ಇಡಲಾಗಿದೆ. ಎನ್ನುತ್ತಾರೆ.

ಕೈ ಜೋಡಿಸಿದ ಮೂರು ನಿರ್ಮಾಣ ಸಂಸ್ಥೆಗಳು: ಯುವರಾಜ ಕುಮಾರ್‌ರ ಈ ಚಿತ್ರಕ್ಕೆ ಮೂರು ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಅಶ್ವಿನಿ ಪುನೀತ್ ರಾಜಕುಮಾರ್ (ಪಿಆರ್‌ಕೆ ಪ್ರೊಡಕ್ಷನ್), ಜಯಣ್ಣ-ಭೋಗೇಂದ್ರ (ಜಯಣ್ಣ ಫಿಲಂಸ್) ಹಾಗೂ ಕಾರ್ತಿಕ್-ಯೋಗಿ ಬಿ.ರಾಜ್ (ಕೆ.ಆರ್.ಜಿ ಸ್ಟುಡಿಯೋಸ್) ಈ ಸಂಸ್ಥೆಗಳು ಒಗ್ಗಟ್ಟಾಗಿ ಬಂಡವಾಳ ಹೂಡಿಕೆ ಮಾಡುವುದರಿಂದ ಇದೊಂದು ಬಿಗ್ ಬಜೆಟ್ ಸಿನಿಮಾ ಆಗಬಹುದು ಎಂಬ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net