

ತಮಿಳುನಾಡು: ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಆಪ್ತ ಸ್ನೇಹಿತ, ತಮಿಳು ನಟ ವಿಶಾಲ್ (Actor Vishal) ಈ ಹಿಂದೆ ಹಲವಾರು ವಿಚಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದ ಬಗ್ಗೆ ಹಲವರಿಗೆ ಗೊತ್ತೇ ಇದೆ. ಯಾವುದೋ ದೀರ್ಘ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು ಮತ್ತು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅದಾದ ಬಳಿಕ ಇತ್ತೀಚೆಗೆ ತರುಣಿ ಸಾಯಿ ಧನ್ಶಿಕಾ ಜತೆಗೆ ಎಂಗೇಜ್ಮೆಂಟ್ ಮಾಡಿಕೊಂಡ ವಿಶಾಲ್, ಇದೀಗ ತಮ್ಮ ಸಾಹಸ ದೃಶ್ಯಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.
ತಮಿಳು ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಆ್ಯಕ್ಷನ್ ಹೀರೋ ಎಂದೇ ಗುರುತಿಸಿಕೊಂಡಿರುವ ವಿಶಾಲ್, ತಮ್ಮ ಅಪಾಯಕಾರಿ ಸ್ಟಂಟ್ಸ್ ದೃಶ್ಯಗಳಿಂದಲೇ ಮತ್ತೊಮ್ಮೆ ಚರ್ಚೆಗೆ ಬಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ವೃತ್ತಿಜೀವನದಲ್ಲಿ ಎಷ್ಟೇ ಬಾರಿ ಗಾಯಗೊಂಡಿದ್ದರೂ ಸಾಹಸ ದೃಶ್ಯಗಳನ್ನು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ ಎಂಬುದರ ಬಗ್ಗೆ ಮನಬಿಚ್ಚಿ ಹಂಚಿಕೊಂಡರು. ಪಾಂಡಿಯಾ ನಾಡು, ಭೀಮಾ, ಪಯಾನ್, ಅಭಿಮನ್ಯುಡು, ಲಾಠಿ ಮತ್ತು ಮಾರ್ಕ್ ಆ್ಯಂಟನಿ ಸೇರಿ ಮುಂತಾದ ಚಿತ್ರಗಳಲ್ಲಿನ ಅವರ ಆ್ಯಕ್ಷನ್ ಸೀನ್ಗಳು ಸಿನಿಪ್ರಿಯರ ಗಮನ ಸೆಳೆದಿವೆ.
ನಟನ ಸಾಹಸ ದೃಶ್ಯಗಳಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಪ್ರತಿ ಸಿನಿಮಾಗೂ ಹೊಸ ಬಗೆಯ ಸಾಹಸ ದೃಶ್ಯಗಳನ್ನು ಮಾಡುವುದು ಮತ್ತು ಅಪಾಯಕಾರಿ ಸ್ಟಂಟ್ಗಳನ್ನು ಪ್ರಯತ್ನಿಸುವ ಮೂಲಕ ವಿಶಾಲ್ ತಮ್ಮ ಫ್ಯಾನ್ಸ್ ಮತ್ತು ಚಿತ್ರರಸಿಕರ ಹೃದಯವನ್ನು ಗೆಲ್ಲುತ್ತಿದ್ದಾರೆ. ಇದೀಗ ಅದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, "ನನ್ನ ದೇಹದ ಮೇಲೆ ಇದುವರೆಗೆ 119 ಹೊಲಿಗೆಗಳು ಬಿದ್ದಿವೆ. ಅದಕ್ಕೆ ಕಾರಣ, ನಾನು ಚಿತ್ರಕ್ಕಾಗಿ ಸ್ಟಂಟ್ ಮಾಡಲು ಹೋದಾಗ ಆಗಿರುವ ಗಾಯಗಳು. ಹಲವು ಬಾರಿ ಗಾಯಗೊಂಡಿದ್ದೇನೆ. ಆದರೆ, ನಾನು ಮಾಡಿರುವ ಸಾಹಸ ದೃಶ್ಯಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿದಾಗ ಆ ನೋವನ್ನೆಲ್ಲ ಮರೆತುಬಿಡುತ್ತೇನೆ" ಎಂದಿದ್ದಾರೆ.
"ನನ್ನ ಸಿನಿಮಾಗಳಲ್ಲಿ ಡೂಪ್ಗಳನ್ನು ಬಳಸಿ, ಸ್ಟಂಟ್ ಮಾಡುವುದು ನನಗೆ ಇಷ್ಟವಿಲ್ಲ. ನಾನು ಮಾಡುವ ಪ್ರತಿಯೊಂದು ಸಾಹಸಮಯ ದೃಶ್ಯಗಳು ನನಗೊಂದು ಕಿಕ್ ನೀಡುತ್ತದೆ. ಒಂದು ಚಿತ್ರ ಎಂದಮೇಲೆ ಅಲ್ಲಿ ಆ್ಯಕ್ಷನ್ ಮತ್ತು ಭಾವನೆಗಳ ಮಿಶ್ರಣ ಇರಬೇಕು. ನಾನು ಮಾಡುವ ಸಾಹಸಗಳು ವಾಸ್ತವಿಕವಾಗಿರಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಡಬ್ಬಿಂಗ್ ಅಗತ್ಯ ಎಂದು ಗೊತ್ತಿದ್ದರೂ, ಹೆಚ್ಚಿನ ಸಮಯ ಸ್ಟಂಟ್ಸ್ಗಳಿಗೆ ಮೀಸಲಿಡುತ್ತೇನೆ. ಸಾಹಸ ಮಾಡುವ ವೇಳೆ ಅಪಘಾತ ಸಂಭವಿಸುವ ಬಗ್ಗೆ ನನಗೆ ಭಯವಿಲ್ಲ. ಹಾಗಂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದೇ ಖಂಡಿತವಾಗಿಯೂ ಮಾಡಲ್ಲ" ಎಂದು ಹೇಳಿದ್ದಾರೆ.
"ಈ ಹಿಂದೆ ಹಲವಾರು ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸುವ ವೇಳೆ ಅಪಘಾತಗಳನ್ನು ಎದುರಿಸಿದ್ದೇನೆ. ಚಿತ್ರದಲ್ಲಿ ಬೈಕ್ ಸ್ಟಂಟ್ ಶೂಟಿಂಗ್ನಲ್ಲಿ, ಬಿದ್ದು ನನ್ನ ಕಾಲು ಮುರಿದಿತ್ತು. ಮತ್ತೊಮ್ಮೆ, ಗಾಜಿನ ಸಾಹಸ ದೃಶ್ಯದ ಸಮಯದಲ್ಲಿ ನನ್ನ ಕೈಗೆ ಆಳವಾದ ಗಾಯವಾಗಿ 17 ಹೊಲಿಗೆಗಳನ್ನು ಹಾಕಬೇಕಾಯಿತು. ಆದರೆ, ನಾನು ಪ್ರೇಕ್ಷಕರಿಗಾಗಿ ಇದನ್ನೆಲ್ಲ ಮಾಡುತ್ತಿರುವಾಗ ಆ ನೋವುಗಳೆಲ್ಲ ಏನೂ ಅಲ್ಲ. ಅವರ ಮುಂದೆ ಇದೆಲ್ಲ ಚಿಕ್ಕದಾಗಿ ಕಾಣುತ್ತವೆ" ಎಂದು ವಿಶಾಲ್ ನಗುತ್ತಲೇ ಹೇಳಿದ್ದಾರೆ,(ಏಜೆನ್ಸೀಸ್).