Vinod Prabhakar - "ಬಲರಾಮನ ದಿನಗಳು', ವಿನೋದ್​ ಮಾತುಗಳು

ವಿನೋದ್ ಪ್ರಭಾಕರ್
ವಿನೋದ್ ಪ್ರಭಾಕರ್
Published on
Vinod Prabhakar -
"ಮಾದೇವ' ಚಿತ್ರದ ಯಶಸ್ಸಿನ ಬಳಿಕ ವಿನೋದ್​ ಪ್ರಭಾಕರ್​ ನಟಿಸಿರುವ "ಬಲರಾಮನ ದಿನಗಳು' ಇಂದು ರಿಲೀಸ್​ ಆಗಿದೆ. "ಆ ದಿನಗಳು' ನಂತರ ಕೆ.ಎಂ. ಚೈತನ್ಯ ನಿರ್ದೇಶನದ ಬೆಂಗಳೂರು ಭೂಗತ ಲೋಕದ ಕುರಿತ ಕಥೆಯಾದ ಕಾರಣ ಈ ಚಿತ್ರದ ಬಗ್ಗೆ ಮೊದಲಿನಿಂದಲೂ ನಿರೀಕ್ಷೆ ಇತ್ತು. ಹಾಡು, ಟೀಸರ್​, ಟ್ರೇಲರ್​ಗಳು ಆ ನಿರೀಕ್ಷೆಯನ್ನು ಹೆಚ್ಚಿಸಿದ್ದವು. ವಿನೋದ್​ಗೆ ಇಲ್ಲಿ ಪ್ರಿಯಾ ಆನಂದ್​ ನಾಯಕಿಯಾಗಿದ್ದು ಆಶಿಶ್​ ವಿದ್ಯಾರ್ಥಿ, ಅತುಲ್​ ಕುಲಕರ್ಣಿ, ರಮೇಶ್​ ಇಂದಿರ, ವಿನಯ್​ ಗೌಡ, ಪ್ರತಾಪ್​ ನಾರಾಯಣ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ವಿನೋದ್​, "ಹಾಸನ ಮೂಲದ ನಿರ್ಮಾಪಕ ಶ್ರೇಯಸ್​ ನನ್ನ ಅಭಿಮಾನಿ. "ಆ ದಿನಗಳು' ಚಿತ್ರವನ್ನು ಟಿವಿಯಲ್ಲಿ ನೋಡಿ ಅದರ ಫ್ಯಾನ್​​ ಆಗಿದ್ದರು. ಬಲರಾಮ ಕೂಡ ಹಾಸನ್​ನವರೇ ಆದ ಕಾರಣ ಅವರ ಕುರಿತ ಕಥೆಯನ್ನು ಕೆ.ಎಂ.ಚೈತನ್ಯ ಮತ್ತು ನನ್ನ ಕಾಂಬಿನೇಷನ್​ನಲ್ಲಿ ಮಾಡುವ ಬಗ್ಗೆ ನನ್ನ ಬಳಿ ಹೇಳಿಕೊಂಡರು. ನಾನು ಚೈತನ್ಯರನ್ನು ಸಂಪರ್ಕಿಸಲು ತಿಳಿಸಿದೆ. ಅವರು, ಬಯೋಪಿಕ್​ ಬೇಡ ಅಂದರು. ಒಬ್ಬೊಬ್ಬರ ದೃಷ್ಟಿಯಲ್ಲಿ ಬಲರಾಮ ಒಂದೊಂದು ರೀತಿ ಇದ್ದ. ಆ ಎಲ್ಲ ಮಾಹಿತಿಗಳನ್ನೂ ಕಲೆ ಹಾಕಿ, ಅದಕ್ಕೊಂದು ಲವ್​ಸ್ಟೋರಿ ಸೇರಿಸಿ, ನೈಜ ಪಾತ್ರಗಳ ಸುತ್ತ ಕಾಲ್ಪನಿಕ ಕಥೆ ಮಾಡಿದರು' ಎಂದು ಸಿನಿಮಾ ಪ್ರಾರಂಭವಾದ ಬಗ್ಗೆ ಮಾಹಿತಿ ನೀಡುತ್ತಾರೆ.

ಮೆಥಡ್​ ಆ್ಯಕ್ಟಿಂಗ್​ ಸಿದ್ಧತೆ

ಇತ್ತೀಚಿನ ವರ್ಷಗಳಲ್ಲಿ ವಿನೋದ್​ ಪ್ರತಿ ಪಾತ್ರಕ್ಕೂ ತಮ್ಮದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಆ ಬಗ್ಗೆ, "ನಾನೀಗ ಮೆಥಡ್​ ಆ್ಯಕ್ಟಿಂಗ್​ ರೂಢಿಸಿಕೊಂಡಿದ್ದೇನೆ. "ಮಾದೇವ' ಸಮಯದಲ್ಲೂ ನಾಲ್ಕೈದು ತಿಂಗಳು ಮಾದೇವನಾಗೇ ಇದ್ದೆ. ಈ ಚಿತ್ರದ ಸಮಯದಲ್ಲಿ ಬಲರಾಮನಾಗೇ ಇದ್ದೆ. ಹಾಗೆ ಒಮ್ಮೆ ಒಂದು ಪಾತ್ರವಾದರೆ, ಆ ಸಿನಿಮಾ ಮುಗಿಯುವವರೆಗೂ ಅದನ್ನೇ ಕ್ಯಾರಿ ಮಾಡುತ್ತೇನೆ. ಆಶಿಶ್​ ವಿದ್ಯಾರ್ಥಿ ಮತ್ತು ಅತುಲ್​ ಕುಲಕರ್ಣಿ ಅವರಂತಹ ರಾಷ್ಟ್ರಪ್ರಶಸ್ತಿ ವಿಜೇತ ನಟರ ಜತೆ ತೆರೆ ಹಂಚಿಕೊಳ್ಳುವುದು ಎಂದರೆ ಸಾಮಾನ್ಯ ಮಾತಲ್ಲ. ಹೀಗಾಗಿ ಅವರ ಜತೆಗೂ ರಿಹರ್ಸಲ್​ ಮಾಡುತ್ತಿದ್ದೆ. ರಂಗಭೂಮಿಯಲ್ಲಿ ಹೇಗೆ ಸಿದ್ಧತೆ ನಡೆಯುತ್ತದೋ, ಶೂಟಿಂಗ್​ ಸ್ಪಾಟ್​ನಲ್ಲಿ ನಮ್ಮ ಸಿದ್ಧತೆ ಹಾಗೇ ಇರುತ್ತಿತ್ತು. ಪ್ರತಿದಿನ ಪ್ಯಾಕಪ್​ ಬಳಿಕ ನಾಳೆ ಏನು ಎಂದೂ ಚರ್ಚಿಸುತ್ತಿದ್ದೆವು. ಅದರಿಂದ ನನಗೂ ಈಜಿ ಆಗುತ್ತಿತ್ತು. ಕೆಲಸಗಳೂ ಬೇಗ ಆಗುತ್ತಿದ್ದವು' ಎಂದು ಹೇಳಿಕೊಳ್ಳುತ್ತಾರೆ.

"ರಾಘವ'ನಾದ "ಲಂಕಾಸುರ'

"ಲಂಕಾಸುರ' ಶೀರ್ಷಿಕೆಯನ್ನು "ರಾಘವ' ಎಂದು ಬದಲಿಸಿದ್ದೇವೆ. ಲಂಕಾಸುರ, ಭಸ್ಮಾಸರು, ಕಾಳಿ, ರಾವಣ, ರಾವಣಾಸುರದಂತಹ ಟೈಟಲ್​ಗಳು ನನಗೆ ಯಾಕೋ ಬೇಡ ಅಂತನ್ನಿಸಿತು. ಮಣಿರತ್ನಂ ಅವರ "ರಾವಣ' ಸಿನಿಮಾ ಅವರ ಕರಿಯರ್​ನ ಅತಿ ದೊಡ್ಡ ಫ್ಲಾಪ್​ ಆಯಿತು. "ರಾಘವ' ರಾಮನ ಹೆಸರು. "ಲಂಕಾಸುರ' ರಾವಣನ ಹೆಸರು. ಕೆಲವೇ ದಿನಗಳಲ್ಲಿ ಆ ಚಿತ್ರದ ಪ್ರಚಾರ ಪ್ರಾರಂಭಿಸಲಿದ್ದೇವೆ. "ನೆಲ್ಸನ್​' ಕೂಡ ರೆಡಿಯಾಗುತ್ತಿದೆ. ಜತೆಗೆ ಇನ್ನೂ ಒಂದು ಹೊಸ ಚಿತ್ರದಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದರ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net