

ಕೊಚ್ಚಿ: ಮಾಲಿವುಡ್ನ ಬ್ಲಾಕ್ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಬೃಹತ್ ಆಳದ ಹಳಕ್ಕೆ ಬಿದ್ದು ಸಾವು ಗೆದ್ದು ಬರುವ ವ್ಯಕ್ತಿಯ ಪಾತ್ರವನ್ನು ನಿಭಾಯಿಸಿದ್ದ ಸುಭಾಷ್ ಅಲಿಯಾಸ್ ನಟ ಶ್ರೀನಾಥ್ ಭಾಸಿ (Actor Sreenath Bhasi) ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದು, ಹಿಟ್ ಅಂಡ್ ರನ್ ಪ್ರಕರಣದಲ್ಲಿ (License Suspended) ಪೊಲೀಸರ ಅತಿಥಿಯಾಗಿದ್ದಾರೆ.
ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ಕಾರು ನಿಲ್ಲಿಸದೆ ಚಲಾಯಿಸಿಕೊಂಡು ಹೋದ ಶ್ರೀನಾಥ್ ಭಾಸಿ, ಇದೀಗ ಗಾಯಗೊಂಡ ಚಾಲಕನ ದೂರಿನ ಹಾಗೂ ಸಾಕ್ಷಿಯ ಮೇರೆಗೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಈ ಕೇಸ್ಗೆ ಸಂಬಂಧಿಸಿದಂತೆ ನಟನ ಡ್ರೈವಿಂಗ್ ಲೈಸೆನ್ಸ್ ಅನ್ನು ಪೊಲೀಸರು ರದ್ದುಗೊಳಿಸಿದ್ದಾರೆ. ಭಾಸಿ ಚಲಾಯಿಸುತ್ತಿದ್ದ ಕಾರು ರಭಸವಾಗಿ ಬೈಕ್ನಲ್ಲಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಕಾರ್ಪೊರೇಷನ್ ಕಚೇರಿ ಎದುರು ಅಕ್ಟೋಬರ್ 8ರಂದು ನಡೆದಿದೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸಿದ ಬೆನ್ನಲ್ಲೇ ನಟ ತನ್ನ ಕಾರನ್ನು ನಿಲ್ಲಿಸದೆ, ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಮಟ್ಟಂಚೇರಿಯ ಚುಲ್ಲಿಕಲ್ ನಿವಾಸಿ ಮುಹಮ್ಮದ್ ಫಹೀಂ ಕೊಟ್ಟ ದೂರಿನ ಮೇರೆಗೆ ಪೊಲೀಸರು ಶ್ರೀನಾಥ್ ಭಾಸಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಅಪಘಾತದ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ನಟನನ್ನು ಬಿಡುಗಡೆಗೊಳಿಸಿದ ಪೊಲೀಸರು, ಇದೀಗ ಭಾಸಿಯ ಡ್ರೈವಿಂಗ್ ಲೈಸೆನ್ಸ್ ಅನ್ನು ಒಂದು ತಿಂಗಳ ಕಾಲ ರದ್ದುಗೊಳಿಸಿದ್ದಾರೆ,(ಏಜೆನ್ಸೀಸ್).