ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ನಟ ರಿಷಬ್ ಶೆಟ್ಟಿ

Oplus_16908288
ನಗರದಲ್ಲಿರುವ ಶ್ರೀ ನಂಜುಂಡೇಶ್ವರಸ್ವಾಮಿ ದೇವಸ್ಥಾನಕ್ಕೆ ನಟ ರಿಷಬ್ ಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದರು.
Published on

ನಂಜನಗೂಡು: ಐತಿಹಾಸಿಕ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ ಬಹಳ ಅದ್ಭುತವಾಗಿದೆ. ಇಲ್ಲಿಗೆ ಬಂದಿದ್ದು ನನ್ನ ಪುಣ್ಯ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.

ನಗರದಲ್ಲಿರುವ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯಕ್ಕೆ ಗುರುವಾರ ಬೆಳಗ್ಗೆ ಆಗಮಿಸಿ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಿ ದೇವಿ, ಚಂಡಿಕೇಶ್ವರ, ನಾರಾಯಣಸ್ವಾಮಿ ದೇವರುಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು ಕಾಂತಾರ ಚಾಪ್ಟರ್-1 ಚಿತ್ರವು ವಿಶ್ವಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿನ ಎಲ್ಲ ದೇವಾಲಯಗಳಿಗೂ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದೇನೆ. ಇಂದು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದೆ. ಪಕ್ಕದಲ್ಲಿರುವ ಶ್ರೀ ನಂಜುಂಡೇಶ್ವರನ ಸನ್ನಿಧಿಗೆ ಆಗಮಿಸಿದ್ದೇನೆ. ದೇವಾಲಯದ ಒಳಗೆ ನೋಡಿದಾಗ ಬಹಳ ಅದ್ಭುತವಾಗಿದೆ. ಮುಂದಿನ ದಿನಗಳಲ್ಲಿ ಕುಟುಂಬ ಸಮೇತ ಮತ್ತೊಮ್ಮೆ ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ. ನಂಜನಗೂಡಿನ ಜನತೆಗೆ ಯಾವಾಗಲೂ ನಾನು ಚಿರಋಣಿ ಎಂದರು.

ದೇವಸ್ಥಾನದ ವತಿಯಿಂದ ನಟನಿಗೆ ಹಾರ ಮತ್ತು ಶಲ್ಯ ಹಾಕಿ, ಪ್ರಸಾದ ನೀಡಿ ಗೌರವಿಸಲಾಯಿತು. ನೆಚ್ಚಿನ ನಟ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ನೋಡಲು ದೇವಾಲಯದ ಮುಂಭಾಗ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ನಟನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡುಬಂತು. ಆದರೂ ನಟ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ನಿರಾಸೆ ಮಾಡದೆ ಸೆಲ್ಫಿಗೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net