

Ravi Mohan: ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ರವಿ ಮೋಹನ್ ಅಲಿಯಾಸ್ ಜಯಂ ರವಿ ಸದ್ಯ ತಮ್ಮ ಪತ್ನಿ ಆರತಿಯಿಂದ ಬೇರೆಯಾಗಿರುವ ಸುದ್ದಿ ಬಹುತೇಕರಿಗೆ ಗೊತ್ತೇ ಇದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರು ಬೇರೆಯಾಗಿದ್ದು, ಪ್ರತ್ಯೇಕ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ಇದರ ನಡುವೆ ರವಿ ಮೋಹನ್, ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದ್ದು, ರವಿ ಅವರ ಬಂಗಲೆಯನ್ನು ಬ್ಯಾಂಕ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಕೌಟುಂಬಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರವಿ ಮೋಹನ್, ಬ್ಯಾಂಕ್ ಅಧಿಕಾರಿಗಳಿಂದ ತೆಗೆದುಕೊಂಡ ಸಾಲವನ್ನು ಕಟ್ಟುವಂತೆ ಎಚ್ಚರಿಕೆಯ ನೋಟಿಸ್ ಕೂಡ ಪಡೆದಿದ್ದಾರೆ. ಹಲವಾರು ನೋಟಿಸ್ಗಳ ಬೆನ್ನಲ್ಲೇ ನಟನ ಮನೆ ಮತ್ತು ಸ್ಟುಡಿಯೋಗೆ ಮುಟ್ಟುಗೋಲು ಹಾಕಿರುವ ಬ್ಯಾಂಕ್ ಅಧಿಕಾರಿಗಳು, ಹಣ ಪಾವತಿಯಾಗದೆ ಇದ್ದಲ್ಲಿ, ಶೀಘ್ರವೇ ಹರಾಜು ಪ್ರಕ್ರಿಯೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಚೆನ್ನೈ ಇಸಿಆರ್‌ನಲ್ಲಿ ಜಯಂ ರವಿ ಖರೀದಿಸಿದ ಬಂಗಲೆಗೆ ಸಾಲವನ್ನು ಮಾಡಲಾಗಿತ್ತು. ಕಳೆದ 10 ತಿಂಗಳಿನಿಂದ 7.64 ಕೋಟಿ ರೂ. ಹಣದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಮುಟ್ಟುಗೋಲು ಪ್ರಕ್ರಿಯೆಗಳನ್ನು ಇದೀಗ ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ಬ್ಯಾಂಕ್ ಅಧಿಕಾರಿಗಳು ನಟನ ಮನೆ ಮತ್ತು ಸ್ಟುಡಿಯೋಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಆದಾಗ್ಯೂ, ತೆನಾಂಪೇಟಾದ ಕೆಮಿಯರ್ಸ್ ರಸ್ತೆಯಲ್ಲಿರುವ ರವಿ ಮೋಹನ್ ಸ್ಟುಡಿಯೋದಲ್ಲಿ ಅಧಿಕಾರಿಗಳು ಅಂಟಿಸಿದ್ದ ನೋಟಿಸ್ ಅನ್ನು ಅಲ್ಲಿನ ಸಿಬ್ಬಂದಿಗಳು ಹರಿದು ಹಾಕಿದ್ದಾರೆ.
ಪ್ರಸ್ತುತ, ರವಿ ಅವರ ಪತ್ನಿ ಆರತಿ ರವಿ ತಮ್ಮ ಮಕ್ಕಳೊಂದಿಗೆ ಅದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ರವಿ-ಆರತಿ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಮನೆ ಹರಾಜಿಗೆ ಬಂದರೆ, ತಮ್ಮ ಮಕ್ಕಳೊಂದಿಗೆ ಆರತಿ ಎಲ್ಲಿ ಹೋಗ್ತಾರೆ? ಈ ವಿವಾದ ಮುಂದೆ ಎಲ್ಲಿಗೆ ಹೋಗುತ್ತೆ? ಎಂಬ ಪ್ರಶ್ನೆಗಳು ಸದ್ಯ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).