

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆಪ್ ಬಗ್ಗೆ ಜನಜಾಗೃತಿ ಮೂಡಿಸಲು ಕೈ ಜೋಡಿಸುವಂತೆ ಚಿತ್ರನಟ ಪುನೀತ್ ರಾಜಕುಮಾರ್ ಅವರಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.
ಪುನೀತ್ ಅವರನ್ನು ಬುಧವಾರ ಭೇಟಿ ಮಾಡಿದ ಡಿಸಿಎಂ, ಆರೋಗ್ಯ ಸೇತು ಆಪ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅಲ್ಲದೆ, ಕೋವಿಡ್-19 ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ತಲುಪುವುದು ಅಗತ್ಯ. ಆ ನಿಟ್ಟಿನಲ್ಲಿ ಆರೋಗ್ಯ ಸೇತು ಆಪ್ ಹೆಚ್ಚು ಅನುಕೂಲ. ಆದ್ದರಿಂದ ಎಲ್ಲರೂ ಒಟ್ಟಾಗಿ ಆಪ್ ಬಗ್ಗೆ ಜಾಗೃತಿ ಮೂಡಿಸೋಣ ಎಂದು ಕೋರಿದರು. ಡಿಸಿಎಂ ಮನವಿಗೆ ಸ್ಪಂದಿಸಿದ ಪುನೀತ್, ತಕ್ಷಣ ತಮ್ಮ ಮೊಬೈಲ್ಫೋನ್ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡರಲ್ಲದೆ ಸರ್ಕಾರಕ್ಕೆ ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧ ಎಂದು ಭರವಸೆ ನೀಡಿದರು.
ಆರೋಗ್ಯ ಸೇತು ಆಪ್: ಸೋಂಕಿತರ ಮೇಲೆ ನಿಗಾ ಇರಿಸುವ ಆರೋಗ್ಯ ಸೇತು, ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತದೆ. ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಸೋಂಕಿತರ ಚಲನವಲನದ ಬಗ್ಗೆಯೂ ನಿಗಾ ವಹಿಸುತ್ತದೆ. ಇದು ಕನ್ನಡ ಸೇರಿ 11 ಭಾಷೆಗಳಲ್ಲಿ ಲಭ್ಯವಿದೆ.