

ಅಮರಾವತಿ: ಬಾಲಿವುಡ್ ನಟರಾದ ಸಲ್ಮಾನ್ ಖಾರ್ ಮತ್ತು ಶಾರೂಖ್ ಖಾನ್ಗೆ ಜೀವ ಬೆದರಿಕೆ ಇತ್ತು. ಆದರೀಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿನ ನಾಯಕ ನಟನಿಗೂ ಜೀವ ಬೆದರಿಕೆ ಕರೆ ಬಂದಿದೆ. ಟಾಲಿವುಡ್ ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಂತ್ರಿ ಪವನ್ ಕಲ್ಯಾಣ್(Pawan Kalyan) ಅವರಿಗೆ ಬೆದರಿಕೆ ಕರೆ ಬಂದಿದೆ. ಪವನ್ ಕಲ್ಯಾಣ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ. ತನಿಖೆ ಆರಂಭಿಸಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಅವರ ಕಚೇರಿಯ ಸಿಬ್ಬಂದಿ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದಾಗ ಈ ಮಾಹಿತಿಯು ಬೆಳಕಿಗೆ ಬಂದಿದೆ. ಅದರಲ್ಲಿ ಪವನ್ ಕಲ್ಯಾಣ್ ಅವರನ್ನು ಕೊಲ್ಲಲಾಗುವುದು ಎಂದು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಅಪರಾಧಿಗಳ ಹುಡುಕಾಟವನ್ನು ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಪವನ್ ಕಲ್ಯಾಣ್ ಅವರ ಪಕ್ಷವು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದೆ.
ಸದ್ಯಕ್ಕೆ ಕರೆ ಮಾಡಿದ ವ್ಯಕ್ತಿ ಯಾರು ಮತ್ತು ಆತನ ಉದ್ದೇಶವೇನು ಎಂಬುದು ತಿಳಿದುಬಂದಿಲ್ಲ. ಬೆದರಿಕೆ ಹಾಕಿದ ವ್ಯಕ್ತಿಯನ್ನು ಗುರುತಿಸಲು ಕರೆ ವಿವರ ದಾಖಲೆಗಳು (ಸಿಡಿಆರ್) ಮತ್ತು ಸಂದೇಶಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಅವರು ಸಮುದ್ರಕನಿ ನಿರ್ದೇಶನದ ಬ್ರೋ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ 1996ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಾದ ಬಳಿಕ 2008ರಲ್ಲಿ ರಾಜಕೀಯಕ್ಕೆ ಬಂದರು. ಪವನ್ ಕಲ್ಯಾಣ್ ಕೂಡ ತಮ್ಮ ಪರೋಪಕಾರಿ ಕೆಲಸದಿಂದ ಜನಪ್ರಿಯವಾಗಿದ್ದಾರೆ.(ಏಜೆನ್ಸೀಸ್)